ಸಮಗ್ರ ನ್ಯೂಸ್: ಪರಿಸರ ಸಂರಕ್ಷಣೆ ದೃಷ್ಟಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲೆ, ತಾಲೂಕುಗಳಲ್ಲಿನ ಮಂಡಳಿಯ ಅಧಿಕಾರಿಗಳು ವಾಣಿಜ್ಯ ಉದ್ದಿಮೆಗಳ ಮೇಲೆ ನಿಗಾವಹಿಸಿ, 2023-24ನೇ ಸಾಲಿನಲ್ಲಿ ನಿಯಮ ಉಲ್ಲಂಘಿಸಿದ 131 ಉದ್ದಿಮೆಗಳ ಸ್ಥಗಿತಕ್ಕೆ ಹಾಗೂ ಕ್ರಮಕ್ಕೆ ಆದೇಶಿಸಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿರುವ ಆದೇಶದಲ್ಲಿರುವಂತೆ ಬೆಂಗಳೂರಿನಲ್ಲಿನ ಉದ್ದಿಮೆಗಳ ಸಂಖ್ಯೆಯೇ ಹೆಚ್ಚಿದೆ. 131ರ ಪೈಕಿ 100ಕ್ಕೂ ಹೆಚ್ಚಿನ ಉದ್ದಿಮೆಗಳು ಬೆಂಗಳೂರಿನದ್ದಾಗಿವೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಹೆಚ್ಚಿವೆ. ಅಲ್ಲದೆ, ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಕಾಯ್ದೆ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಉದ್ದಿಮೆಗಳನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಲಾಗಿದೆ.
ರಾಜ್ಯದಲ್ಲಿ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಕಾಲಕಾಲಕ್ಕೆ ಉದ್ದಿಮೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಸಾರ್ವಜನಿಕರಿಂದ ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಉದ್ದಿಮೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ವೇಳೆ ಉದ್ದಿಮೆಯಿಂದ ಯಾವುದಾದರು ನಿಯಮ ಉಲ್ಲಂಘನೆ ಕಂಡು ಬಂದರೆ ಹಾಗೂ ನೀರು, ಗಾಳಿ ಸೇರಿದಂತೆ ಪರಿಸರಕ್ಕೆ ಮಾರಕವಾಗುವಂತಹ ಅಂಶಗಳು ಕಂಡು ಬಂದರೆ ಉದ್ದಿಮೆಗಳಿಗೆ ದಂಡ ವಿಧಿಸುವುದರ ಜತೆಗೆ, ಅವುಗಳನ್ನು ಸ್ಥಗಿತಗೊಳಿಸಲೂ ಕ್ರಮ ಕೈಗೊಳ್ಳುತ್ತಿದೆ.
ಅದರಂತೆ 2011ರಿಂದ 2022ರವರೆಗೆ ಬೆಂಗಳೂರಿನಲ್ಲಿಯೇ ಜಲಮೂಲಗಳನ್ನು ಹಾಳು ಮಾಡುತ್ತಿರುವ ಕಾರಣಕ್ಕಾಗಿ 100ಕ್ಕೂ ಹೆಚ್ಚಿನ ಕೈಗಾರಿಕೆ, ವಾಣಿಜ್ಯ ಉದ್ಯಮಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಅದನ್ನು ಹೊರತುಪಡಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ 2022-23ರಲ್ಲಿ ರಾಜ್ಯಾದ್ಯಂತ ಜಲ ಹಾಗೂ ವಾಯು ಮಾಲಿನ್ಯಕ್ಕೆ ಕಾರಣವಾಗಿದ್ದ 131 ಉದ್ದಿಮೆಗಳ ಸ್ಥಗಿತಕ್ಕೆ ಆದೇಶಿಸಿ ಕ್ರಮ ಕೈಗೊಳ್ಳಲಾಗಿದೆ.