ಸಮಗ್ರ ನ್ಯೂಸ್: ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹಾಸನದ ರಾಸಲೀಲೆ ಪೆನ್ ಡ್ರೈವ್ ಪ್ರಕರಣ ತನಿಖೆಗೆ ಸರ್ಕಾರದಿಂದ ಎಸ್‌ಐಟಿ ರಚಿಸಲಾಗಿದೆ.
ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕೇಳಿ ಬಂದ ಲೈಂಗಿಕ ದೌರ್ಜನ್ಯಗಳ ಆರೋಪಗಳ ಬಗ್ಗೆ ತನಿಖೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ(ಎಸ್‌ಐಟಿ) ರಚಿಸಲಾಗಿದೆ.
ಗೌರಿ ಲಂಕೇಶ್ ಕೊಲೆ ಪ್ರಕರಣದ ವಿಶೇಷ ತನಿಖಾ ದಳ ಸಾರಥ್ಯ ವಹಿಸಿದ್ದ ಪ್ರಸ್ತುತ ಸಿಐಡಿ ಎಡಿಜಿಪಿ ಆಗಿರುವ ಬಿಜಯ್ ಕುಮಾರ್ ಸಿಂಗ್ ಅವರಿಗೆ ಹಾಸನದ ಪೆನ್ ಡ್ರೈವ್ ಕೇಸ್ ತನಿಖೆ ವಹಿಸಲಾಗಿದೆ. ಬಿ.ಕೆ. ಸಿಂಗ್ ನೇತೃತ್ವದ ಈ ತಂಡದಲ್ಲಿ ಇಬ್ಬರು ಎಸ್.ಪಿ.ಗಳು, 5 ಮಂದಿ ಡಿವೈಎಸ್ಪಿಗಳು ಸೇರಿ ಇತರೆ ಅಧಿಕಾರಿಗಳ ಆಯ್ಕೆ ಜವಾಬ್ದಾರಿಯನ್ನು ಸಿಂಗ್ ಅವರಿಗೆ ಸರ್ಕಾರ ನೀಡಿದೆ.
ಏಪ್ರಿಲ್ 26ರಂದು ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಶೋಷಣೆ ಆರೋಪ ಕೇಳಿ ಬಂದಿದ್ದು, ಹಲವು ಮಹಿಳೆಯರನ್ನು ಶೋಷಣೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ಪೆನ್ ಡ್ರೈವ್ ವಿಚಾರ ಭಾರಿ ಸದ್ದು ಮಾಡಿದ್ದ ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಎಸ್ಐಟಿ ರಚನೆ ಮಾಡಿದೆ.