ಸಮಗ್ರ ನ್ಯೂಸ್ : ಕರ್ನಾಟಕ ಪ್ರವಾಸದಲ್ಲಿರುವ ಮೋದಿಗೆ ಗೋ ಬ್ಯಾಕ್ ಘೋಷಣೆ ಎದುರಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಡಿಎನ್‌ಎ ಕರ್ನಾಟಕ ಮತ್ತು ಕನ್ನಡಿಗರ ವಿರೋಧಿ ಆಗಿದೆ. ಬರ ಪರಿಹಾರ ಮತ್ತು ನೀರಾವರಿ ಯೋಜನೆಗಳಿಗೆ ಅನುದಾನ ನೀಡದ ಮೋದಿ ಸರ್ಕಾರ ಕರ್ನಾಟಕದ ಜನರ ವಿರುದ್ಧ ದ್ವೇಷ ಸಾಧಿಸುತ್ತಿದೆ. ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಖಾಲಿ ಚೊಂಬು ಪ್ರದರ್ಶನ ಮಾಡಿ ಮಾತನಾಡಿದ ಸುರ್ಜೇವಾಲಾ, ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಕೇಳಿದ್ದು ಬರ ಪರಿಹಾರ, ಯಾವುದೇ ಭಿಕ್ಷೆ ಅಲ್ಲ. ಸರ್ಕಾರಕ್ಕೆ ಹೋಗುವ ಜನರ ತೆರಿಗೆ ಹಣದಲ್ಲಿ ಒಂದು ಭಾಗ ಎನ್.ಡಿ.ಆರ್.ಎಫ್ ನಿಧಿಗೆ ಸೇರುತ್ತದೆ. ಮಳೆ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಿಎಂ ಆದಿಯಾಗಿ ಸಚಿವರುಗಳು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಹಲವು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸಂಸತ್ ಎದುರು ಧರಣಿ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ನ್ಯಾಯಯುತ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ಮೋರೆ ಹೋಗಬೇಕಾಯಿತು ಎಂದರು.
ಕೋರ್ಟ್ ಆದೇಶದ ಬಳಿಕ ಕೇಂದ್ರ ಸರ್ಕಾರ ಕೇವಲ 3545 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಕೇಳಿದ್ದು, 18,172 ಕೋಟಿ ರೂ. ಕೇಂದ್ರ ಕೇವಲ ಶೇ. 19 ರಷ್ಟು ಪರಿಹಾರ ನೀಡಿ ಅನ್ಯಾಯ ಮಾಡಿದೆ ಎಂದರು.
ಕರ್ನಾಟಕಕ್ಕೆ ಅನ್ಯಾಯ, ಕರ್ನಾಟಕ ಜನರಿಗೆ ಅನ್ಯಾಯ, ಮೋದಿ ಸರ್ಕಾರ ಕರ್ನಾಟಕದ ರೈತರಿಗೆ ಖಾಲಿ ಚೆಂಬು ಕೊಟ್ಟಿದೆ. ಮತ್ತೆ ಸುಪ್ರೀಂ ನಲ್ಲಿ ಮನವಿ ಸಲ್ಲಿಸುವುದಷ್ಟೇ ಅಲ್ಲ, ಈ ವಿಷಯ ಜನರ ಮಧ್ಯೆ ತೆಗೆದುಕೊಂಡು ಹೋಗುತ್ತೇವೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಕರ್ನಾಟಕದ ರೈತರಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದು ಸುರ್ಜೇವಾಲಾ ಹೇಳಿದರು.