ಸಮಗ್ರ ನ್ಯೂಸ್ : ಸೈಕಲ್ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು 2 ಕಿಲೋ ಮೀಟರ್ವರೆಗೆ ಎಳೆದುಕೊಂಡು ಹೋಗಿರುವ ಘಟನೆ ಹರಿಯಾಣದ ಸಿರ್ಸಾದ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ನಡೆದಿದೆ.
ಹರಿಯಾಣದ ಕರ್ಮ್‌ಗಢ್ ಗ್ರಾಮದ ಗುರ್ನಾಮ್ ಸಿಂಗ್ (50) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೋಟಾ ಗ್ರಾಮದಿಂದ ತಮ್ಮ ಹಳ್ಳಿಗೆ ರಸ್ತೆ ಮೂಲಕ ಸೈಕಲ್ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಪಿಕಪ್ ವಾಹನ ಮೊದಲು ಡಿಕ್ಕಿ ಹೊಡೆದಿದೆ.
ವ್ಯಕ್ತಿಯನ್ನು ಎಳೆದುಕೊಂಡು ಹೋಗುವುದನ್ನು ಹಿಂದೆ ಬರುತ್ತಿದ್ದ ಟ್ರಕ್ನಲ್ಲಿದ್ದವರು ನೋಡಿದ್ದರು. ಪಿಕಪ್ ವಾಹನವನ್ನು ನಿಲ್ಲಿಸಬೇಕೆಂದು 2 ಕಿಲೋ ಮೀಟರ್ನಿಂದಲೂ ಚಾಲಕ ಹಾರ್ನ್ ಮಾಡುತ್ತಾ, ಕೂಗುತ್ತಾ ವೇಗವಾಗಿ ಬಂದಿದ್ದಾರೆ. ಕೊನೆಗೆ ಟ್ರಕ್ ಡ್ರೈವರ್ ಹೇಗೋ ಪಿಕಪ್ ವಾಹನವನ್ನು ನಿಲ್ಲಿಸಿದ್ದಾರೆ. ಬಳಿಕ ವ್ಯಕ್ತಿಯನ್ನು ವಾಹನದ ಕೆಳಗೆ ನೋಡಿದರೆ ದೇಹವೆಲ್ಲ ಪರಚಿಕೊಂಡು ಹೋಗಿ, ರಕ್ತಸಿಕ್ತವಾಗಿತ್ತು. ಇದರಿಂದ ಕೋಪಗೊಂಡ ಟ್ರಕ್ನಲ್ಲಿದ್ದವರು ಪಿಕಪ್ ವಾಹನದ ಡ್ರೈವರ್, ಕ್ಲೀನರ್ಗೆ ಥಳಿಸಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನ ಸಂಬಂಧಿಕರ ಹೇಳಿಕೆ ಮೇರೆಗೆ ಡ್ರೈವರ್ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.