ಸಮಗ್ರ ನ್ಯೂಸ್: ಚುನಾವಣೆಯ ಹಿನ್ನೆಲೆಯಲ್ಲಿ ಬಿಬಿಎಂಪಿಯ ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 15ರ ವರೆಗೆ ವಿಸ್ತರಣೆ ಮಾಡಿ ಬಿಬಿಎಂಪಿ ಅಧಿಸೂಚನೆ ಹೊರಡಿಸಿದೆ. 11,307 ಪೌರಕಾರ್ಮಿಕರ ನೇಮಕಾತಿಗೆ ಮಾರ್ಚ್‍ನಲ್ಲಿ ಅರ್ಜಿ ಆಹ್ವಾನಿಸಿದ್ದ ಬಿಬಿಎಂಪಿಯು ಏ.15ರವರೆಗೆ ಕಾಲಾವಕಾಶ ನೀಡಿತ್ತು. ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಹಾಗೂ ಆಡಳಿತಾತ್ಮಕ ಕಾರಣ ನೀಡಿ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 15ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಬಿಬಿಎಂಪಿಯ 14,980 ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಸರ್ಕಾರ ಹೇಳಿದ್ದು, ಇದೀಗ ಮೊದಲ ಹಂತದಲ್ಲಿ ಬಿಬಿಎಂಪಿಯ 3,673 ಪೌರಕಾರ್ಮಿಕರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸಲಾಗಿದೆ. ಆದರೆ, ಪೌರಕಾರ್ಮಿಕ ಸಂಘಟನೆಯ ಮುಖಂಡರು, ಎರಡನೇ ಹಂತದ 11,307 ಪೌರಕಾರ್ಮಿಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಏಕಕಾಲಕ್ಕೆ ಎರಡೂ ಹಂತದ ಅಂತಿಮ ಪಟ್ಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಎರಡನೇ ಹಂತದ 11,307 ಪೌರಕಾರ್ಮಿಕರ ಕಾಯಮಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
11,307 ಹುದ್ದೆಗಳ ಪೈಕಿ 10,402 ಹುದ್ದೆಗಳನ್ನು ಉಳಿಕೆ ಮೂಲವೃಂದಕ್ಕೆ ಮೀಸಲಿಡಲಾಗಿದೆ. ಉಳಿದ 905 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ.ಅರ್ಜಿ ಹಾಕಲು ಷರತ್ತುಗಳು:
ಬಿಬಿಎಂಪಿಯಲ್ಲಿ ಕನಿಷ್ಠ ಎರಡು ವರ್ಷ ನೇರಪಾವತಿ, ದಿನಗೂಲಿ ಸೇರಿದಂತೆ ವಿವಿಧ ಆಧಾರದಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸಿರಬೇಕು. ಭಾರತೀಯ ಪ್ರಜೆಯಾಗಿರಬೇಕು. 2023ರ ಮಾರ್ಚ್ 2ಕ್ಕೆ 55 ವರ್ಷ ಮೀರುವಂತಿಲ್ಲ. ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಕಡ್ಡಾಯವಾಗಿ ಮಾತನಾಡಲು ತಿಳಿದಿರಬೇಕು. ದೈಹಿಕ ದೃಢತೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ.