ಸಮಗ್ರ ನ್ಯೂಸ್: ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (76) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ನಿಧನ ಹೊಂದಿದ್ದಾರೆ. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಕಳೆದ ವಾರ ಏರುಪೇರಾಗಿತ್ತು. ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ವೈದ್ಯ ಡಾ. ಸುದರ್ಶನ್ ಬಲ್ಲಾಳ್, ಪ್ರಸಾದ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವು ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ ಸೋಂಕು ಸೇರಿದಂತೆ ಇತರ ವಯೋಸಹಜ ಕಾಯಿಲೆಯಿಂದ ಏಪ್ರಿಲ್ 22ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ಪಾರ್ಥಿವ ಶರೀರ ರವಾನೆ ಮಾಡಲಾಗಿದ್ದು, ಇಂದು ಮೈಸೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶ್ರೀನಿವಾಸ್ ಪ್ರಸಾದ್ ಪಾರ್ಥಿವ ಶರೀರವನ್ನು ಮಣಿಪಾಲ್ ಆಸ್ಪತ್ರೆಯಿಂದ ಮೈಸೂರಿಗೆ ಅಂಬ್ಯುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ.
ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಶ್ರೀನಿವಾಸ್ ಪ್ರಸಾದ್, ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು. ಚಾಮರಾಜನಗರ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಸಾದ್, ಕಳೆದ ಮಾರ್ಚ್ 17 ರಂದು ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.