ಸಮಗ್ರ ನ್ಯೂಸ್ : ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಮುಸ್ಲಿಂ ಮೀಸಲಾತಿ ತೆಗೆಯುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅವರು ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತರು ಮತ್ತು ಹಿಂದುಳಿದವರಿಗೆ ಕಾಂಗ್ರೆಸ್ ಭಾರೀ ಮೋಸ ಮಾಡಿದೆ. ಸಂವಿಧಾನದಲ್ಲಿ ಕೇವಲ ಎಸ್‍ಸಿ, ಎಸ್‍ಟಿ, ಅಲ್ಪಸಂಖ್ಯಾತರು, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಲಾಗಿದೆ.
ಮುಸ್ಲಿಂ ಧರ್ಮಕ್ಕೆ ಮೀಸಲಾತಿ ಕೊಡಲು ಬರುವುದಿಲ್ಲ. ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೊದಲು ಮುಸ್ಲಿಂ ಮೀಸಲಾತಿ ತೆಗೆದು ಹಾಕುತ್ತೇವೆ. ಅದನ್ನು ಎಸ್‍ಸಿ, ಎಸ್‍ಟಿ ಹಾಗೂ ಹಿಂದುಳಿದ ಜನಾಂಗದವರಿಗೆ ಹಂಚಿಕೆ ಮಾಡುತ್ತೇವೆ ಎಂದಿದ್ದಾರೆ.
ಮೊದಲ ಹಂತದಲ್ಲಿ ಮತದಾನ ನಡೆದ 14 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಾತಾವರಣವಿದೆ. ಮೇ 7ರಂದು ನಡೆಯಲಿರುವ ಉಳಿದ 14 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಎರಡನೇ ಹಂತದಲ್ಲಿಯೂ ದಿನದಿಂದ ದಿನಕ್ಕೆ ಬಿಜೆಪಿ, ಮೋದಿ ಅಲೆ ಏಳುತ್ತಿದೆ. ಇದರಿಂದ ಉಳಿದ 14 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.