ಸಮಗ್ರ ನ್ಯೂಸ್: ಇದೇ ಶುಕ್ರವಾರ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಮತದಾನ ನಡೆಯುವ ದಿನ ಸರ್ಕಾರಿ ಕಚೇರಿಗಳ ಸಹಿತ ಐಟಿ ಬಿಟಿ ಕಂಪನಿಗಳಲ್ಲೂ ವೇತನ ಸಹಿತ ರಜೆ ನೀಡಲಾಗಿದೆ. ಈಗ ಮೈಸೂರಿನಲ್ಲಿ ಸಹ ಮಹತ್ವದ ಆದೇಶವೊಂದು ಹೊರಬಿದ್ದಿದೆ. ಏ. 26ರಂದು ಮೈಸೂರು ಅರಮನೆ ವೀಕ್ಷಣೆಗೆ ಬರುವವರು ಕಡ್ಡಾಯವಾಗಿ ಮತ ಚಲಾವಣೆ ಮಾಡಿ ಬಂದಿರಬೇಕು ಇಲ್ಲದಿದ್ದರೆ ಪ್ರವೇಶವನ್ನು ನಿರಾಕರಣೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ.
ಮತ ಹಾಕದೆ ಮೈಸೂರು ಅರಮನೆ ನೋಡಲು ಬಂದವರಿಗೆ ನೋ ಎಂಟ್ರಿ ಬೋರ್ಡ್ ಅನ್ನು ನೇತುಹಾಕಲಾಗುವುದು. ಏ. 26ರ ಮತದಾನದ ದಿನಕ್ಕೆ ಮಾತ್ರ ಈ ನಿರ್ಬಂಧ ಅನ್ವಯವಾಗಲಿದೆ. 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಇದು ಅನ್ವಯವಾಗಲಿದೆ. ಮತ ಹಾಕದೆ ಅರಮನೆ ನೋಡಲು ಬಂದರೆ ಪ್ರವೇಶ ನಿರಾಕರಿಸಲು ಚಿಂತನೆ ನಡೆಸಲಾಗಿದೆ. ಇಂದು ಸಂಜೆಯೊಳಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹೇಳಿದ್ದಾರೆ.