ಸಮಗ್ರ ನ್ಯೂಸ್ : ಇದು ಬಡವರ ಹಾಗೂ ಸಂವಿಧಾನದ ಉಳಿವಿಗಾಗಿ ನಡೆಯುತ್ತಿರುವ ಹೋರಾಟದ ಚುನಾವಣೆ ಎಂದು ಕಾರ್ಮಿಕ ಸಚಿವ ಸಂತೋಷ ಜಿ. ಲಾಡ್ ಹೇಳಿದರು.
ಚಡಚಣ ತಾಲೂಕಿನ ಬರಡೋಲ ಸಮೀಪದ ವಿಠ್ಠಲ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಡೆದ ಇಂಡಿ ಮತ್ತು ನಾಗಠಾಣ ಮತಕ್ಷೇತ್ರದ ಮರಾಠಾ ಸಮುದಾಯದ ಬೃಹತ್ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ನೂರಾರು ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಸುಳ್ಳಿನ ಸಾಮ್ರಾಜ್ಯ ಸೃಷ್ಟಿಸಿದ್ದಾರೆ ಎಂದರು.
ಶಿವಾಜಿಯವರು ಮುಸ್ಲಿಂ ರಾಜರ ವಿರುದ್ಧ ಹೋರಾಡಿದರೇ ಹೊರತು ಮುಸ್ಲಿಂರ ವಿರೋಧಿಯಲ್ಲ. ಶಿವಾಜಿಯವರ ಸೈನ್ಯದಲ್ಲಿ ಸಾವಿರಾರು ಮುಸ್ಲಿಂ ಸೈನಿಕರಿದ್ದರು. ಇದೆಲ್ಲ ಮರೆಮಾಡಿ ಬೇರೆಯದೇ ಚಿತ್ರವನ್ನು ಆರ್‌ಎಸ್‌ಎಸ್‌ನವರು ದೇಶದ ಜನರಲ್ಲಿ ಬಿತ್ತಿದ್ದಾರೆ. ನಾವೆಲ್ಲ ಈಗ ಜಾಗೃತರಾಗಬೇಕಾಗಿದೆ ಎಂದರು.
ಮರಾಠಾ ಸಮುದಾಯದ ಏಳ್ಗೆಗಾಗಿ ತಾವು ಶ್ರಮವಹಿಸುವುದಾಗಿ ಹೇಳಿದ ಲಾಡ್, ನೀವು ಯೋಚನೆ ಮಾಡಿ ಮತ ನೀಡಿ. ಮರಾಠರನ್ನು ಬಿಜೆಪಿಯವರು ಗುತ್ತಿಗೆ ಪಡೆದಂತೆ ಆಡುತ್ತಾರೆ. ಮೋದಿಯವರ ವೈಫಲ್ಯಗಳನ್ನು ನಾವು ಲೆಕ್ಕ ಹಾಕಿ ಮತ ನೀಡಬೇಕು ಎಂದರು. ಈ ಬಾರಿ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿದರೆ ಜನ ಸಾಮಾನ್ಯರ ಬದುಕು ಸುಧಾರಿಸಲಿದೆ. ನಾನು ಹೇಳುತ್ತೇನೆಯಂತಲ್ಲ, ಯೋಚಿಸಿ ಮತ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿ, ಇದು ನಿರ್ಣಾಯಕ ಚುನಾವಣೆ. ಈ ಸಲ ಬದಲಾವಣೆ ಆಗಬೇಕು. ಸತತ ಮೂರು ಬಾರಿ ಆರಿಸಿ ಬಂದು ಯಾವೊಂದು ಮುತುವರ್ಜಿ ವಹಿಸದ ಜಿಗಜಿಣಗಿಯವರನ್ನು ನೀವೆಲ್ಲ ತಿರಸ್ಕರಿಸಿ ಎಂದು ಕೋರಿದರು.
ಅಂತಹ ಕೊರೊನಾ ಸಂದರ್ಭದಲ್ಲೂ ಬಿಜೆಪಿಯವರಿಗೆ ಕರುಣೆ ಇರಲಿಲ್ಲ. ಮರಾಠಾ ಸಮಾಜದ ಜೊತೆ ಯಾವತ್ತೂ ಇರುವೆ. ನಿಷ್ಕ್ರಿಯರನ್ನು ಬದಲಿಸಿ. ನೀವು ನೀಡಿದ ಅವಕಾಶ ಜಿಲ್ಲೆಯನ್ನು ಬದಲಿಸಲಿದೆ ಎಂದರು.
ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಶಿವಾಜಿ ಮಹಾರಾಜರ ವಂಶಸ್ಥರಾದ ಮರಾಠರು ವೀರರು-ಶೂರರು. ಲಾಡ್ ಅವರು ಹುಟ್ಟು ಹೋರಾಟಗಾರ. ಅವರಿಗೆ ಬಲ ತುಂಬೋಣ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ. ಈ ಭಾಗ ಬಿಜೆಪಿ ಪರ ಎನ್ನುವ ಹಣೆಪಟ್ಟಿ ಕಿತ್ತೊಗೆಯಬೇಕು ಎಂದರು.
ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಜಿಗಜಿಣಗಿ ಹಠಾವೋ ತಾಂಡಾ ಬಚಾವೋ ಅಭಿಯಾನದಂತೆ ಕಾಂಗ್ರೆಸ್ ಗೆಲುವಿಗೆ ಲಂಬಾಣಿ ಸಮುದಾಯ ಕಟಿ ಬದ್ಧವಾಗಿರೋಣ. ನಮ್ಮ ಮತ ಬೇಡ ಎಂದ ಬಿಜೆಪಿಯವರನ್ನು ಸೋಲಿಸೋಣ ಎಂದರು.
ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಡಿ.ಎಲ್. ಚವ್ಹಾಣ, ಎಂ.ಆರ್. ಪಾಟೀಲ, ಸುಭಾಷ ಮೋರೆ, ತುಕಾರಾಮ ಶಿಂಧೆ, ಜ್ಯೋತಿಬಾ ಚವ್ಹಾಣ, ಎಂ.ಎಲ್.ಸಾಳುಂಖೆ, ರಮೇಶ ಶಿಂಧೆ, ಕುಮಾರ ಜಾಧವ, ಅಪ್ಪಾಸಾಹೇಬ, ದೀಪಾಲಿ ಶಿಂಧೆ, ತೇಜಸ್ವಿನಿ ಭೋಸ್ಲೆ, ಸುಖದೇವ ಘೋರ್ಪಡೆ, ತುಕಾರಾಮ ಘೋರ್ಪಡೆ, ದಶರಥ ಭೋಸ್ಲೆ, ಅಂಬಾದಾಸ ಶಿಂಧೆ ಅನೇಕರಿದ್ದರು. ಸದಾಶಿವ ಪವಾರ ಪ್ರಾಸ್ತಾವಿಕ ಮಾತನಾಡಿದರು, ಪವಾರ್ ವಕೀಲ ನಿರೂಪಿಸಿದರು.