ಸಮಗ್ರ ನ್ಯೂಸ್: ದೇಶದೆಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಓಡಾಡೊದಕ್ಕಿಂತ ಮನೆಯಲ್ಲಿ ಕೂರುವುದು ಕಷ್ಟವಾಗಿದೆ. ಭಾರತದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ನಿಂದ 46 ಡಿಗ್ರಿ ಸೆಲ್ಸಿಯಸ್‌ವರೆಗೆ ಇದೆ. ಇದೇ ವಿಚಾರವಾಗಿ ಡಿಡಿ ದೂರದರ್ಶನದ ವಾರ್ತಾ ವಾಚಕಿಯೊಬ್ಬರು ಹವಾಮಾನ ವರದಿ ನೀಡುತ್ತಿರುವಾಗಲೇ ಲೈವ್‌ನಲ್ಲಿ ಕುಸಿದು ಬಿದ್ದಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಸೇರಿದ ಬೆಂಗಾಲಿ ದೂರದರ್ಶನದ ಲೈವ್‌ನಲ್ಲಿ ಈ ಘಟನೆ ನಡೆದಿದೆ. ಕೋಲ್ಕತಾ ದೂರದರ್ಶನದ ನಿರೂಪಕಿ ಲೋಪಮುದ್ರ ಸಿನ್ಹಾ ಕುಸಿದು ಬಿದ್ದವರು. ದೂರದರ್ಶನ ಚಾನೆಲ್‌ನಲ್ಲಿ ಪ್ರತಿದಿನದಂತೆ ಅಂದೂ ರಾಜ್ಯದ ಹವಾಮಾನದ ಬಗ್ಗೆ ಅವರು ವರದಿ ಮಾಡುತ್ತಿದ್ದಾಗ ಲೈವ್‌ನಲ್ಲೇ ಪ್ರಜ್ಞೆ ತಪ್ಪಿದ್ದಾರೆ.
ರಕ್ತದೊತ್ತಡ ತೀವ್ರವಾಗಿ ಕುಸಿದಿದ್ದರಿಂದ ತನಗೆ ಲೈವ್‌ನಲ್ಲೇ ಪ್ರಜ್ಞೆ ತಪ್ಪಿತ್ತು ಎಂದು ಅವರು ಚೇತರಿಸಿಕೊಂಡ ಮೇಲೆ ಹೇಳಿದ್ದಾರೆ. ʼʼನ್ಯೂಸ್ ಓದಲು ಆರಂಭಿಸುವುದಕ್ಕೆ ಮೊದಲೇ ನನಗೆ ಸ್ವಲ್ಪ ನಿತ್ರಣವಾದಂತಾಗಿತ್ತು. ಆದರೆ ಅದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆ ವೇಳೆ ನೀರು ಕುಡಿಯಲೂ ಸಮಯವಿಲ್ಲದ್ದರಿಂದ ಹಾಗೆಯೇ ಸ್ಟುಡಿಯೋಗೆ ತೆರಳಿದೆ. ಕಾಕತಾಳೀಯವಾಗಿ ಹವಾಮಾನ ವರದಿಯಲ್ಲಿ ಬಿಸಿಗಾಳಿಯ ಬಗ್ಗೆ ಸುದ್ದಿ ಓದುತ್ತಿರುವ ವೇಳೆ ಲೈವ್‌ನಲ್ಲೇ ಇದಕ್ಕಿದ್ದಂತೆ ಕುಸಿದು ಬಿದ್ದೆʼʼ ಎಂದು ಲೋಪಮುದ್ರ ಸಿನ್ಹಾ ಹೇಳಿದ್ದಾರೆ.