ಸಮಗ್ರ ನ್ಯೂಸ್: ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರ ಬದುಕಿಗೆ ಗ್ಯಾರಂಟಿ ಇಲ್ಲ. ರಾಜ್ಯದಲ್ಲಿ ಕೊಲೆ, ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದೊಂದು ಕ್ರೂರ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ಮೇಲೆ ಕಿಡಿಕಾರಿದರು.
ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ನಡೆದಿದೆ. ಸಿದ್ದರಾಮಯ್ಯ ಅವರು ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ನ್ಯಾಯ ಕೊಡಿಸಿಲ್ಲ ಎಂದು ವಾಗ್ದಾಳಿ ಮಾಡಿದರು. ರಾಜ್ಯದಲ್ಲಿ ಇಷ್ಟು ಪ್ರಕರಣಗಳು ನಡೆದಿದೆ ಒಂದು ಘಟನೆಗೂ ನ್ಯಾಯ ಕೊಡಿಸಿಲ್ಲ, ಜನ ಗ್ಯಾರಂಟಿ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ “ಚೆಂಬು” ಗಲಾಟೆ ಪ್ರಾರಂಭವಾಗಿದು ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ಜಾಹೀರಾತಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜನ ಅವರು ಹೋದ ಕಡೆ ಸೇರುತ್ತಿಲ್ಲ. ಅದಕ್ಕೆ ಜಾಹೀರಾತು ನೀಡುತ್ತಿದ್ದಾರೆ. ಪೊಳ್ಳು ಭರವಸೆ ನೀಡುವ ಜಾಹೀರಾತುಗಳನ್ನು ಯಾರೂ ನಂಬಲ್ಲ. ಚುನಾವಣೆ ಬಳಿಕ ನಾವೆಲ್ಲ ಸೇರೋಣ. ಆಗ ವಾತಾವರಣ ಸ್ಪಷ್ಟವಾಗಿ ತಿಳಿಯುತ್ತದೆ ಎಂದರು. ಕಾಂಗ್ರೆಸ್ ಈ ಬಾರಿ 50 ಸೀಟಿಗಿಂತ ಹೆಚ್ಚಿಗೆ ಬರುವುದಿಲ್ಲ. ರಾಜ್ಯದಲ್ಲಿ ಒಂದು ಕ್ಷೇತ್ರವನ್ನೂ ಗೆಲ್ಲಲಾಗುವುದಿಲ್ಲ. ನಿಮಗೆ ಆತ್ಮವಿಶ್ವಾಸ ಇದ್ದರೆ, ನೀವು ಗೆಲ್ಲುವ 5 ಲೋಕಸಭಾ ಕ್ಷೇತ್ರಗಳ ಹೆಸರನ್ನು ಹೇಳಿ ಎಂದು ಸವಾಲು ಹಾಕಿದರು.