ಸಮಗ್ರ ನ್ಯೂಸ್: ತನ್ನ ಮದುವೆಗೆ ವರನೇ ಕುಡಿದು ಬಂದು ಅವಾಂತರ ಸೃಷ್ಟಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.
ಭಿಂಡ್ ಜಿಲ್ಲೆಯ ಲಹಾರ್ ಮೂಲದ ವೀರೇಂದ್ರ ರಾಜಾವತ್ ಅವರ ಮಗನ ಮದುವೆಯ ಮೆರವಣಿಗೆ ಬ್ಯಾಂಡ್ ವಾದ್ಯಗಳ ಮೂಲಕ ವಧುವಿನ ಮನೆಯ ಬಾಗಿಲಿಗೆ ಬಂದಿತ್ತು. ಆದರೆ ವರ ಕುಡಿದ ಮತ್ತಿನಲ್ಲಿದ್ದ. ಕುದುರೆಯಿಂದ ಇಳಿಯುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಎದ್ದು ನಿಲ್ಲಲು ಆಗದ ಸ್ಥಿತಿಯಲ್ಲಿ ಆತ ಇದ್ದ. ಅಲ್ಲಿದ್ದವರು ವರನನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ. ಆದರೆ ಆತನಡೆಯುವಾಗ ಮತ್ತೆ ಎಡವಿ ಬಿದ್ದಿದ್ದಾನೆ. ಹಾಗೇ ಅವನ ಸ್ನೇಹಿತರು ಕೂಡ ಕುಡಿದ ಮತ್ತಿನಲ್ಲಿದ್ದಿದ್ದರು ಎನ್ನಲಾಗಿದೆ.
ವರನ ಈ ಸ್ಥಿತಿ ಕಂಡು ಬೇಸರಗೊಂಡ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಆಕೆಯ ಮನವೊಲಿಸಲು ಕುಟುಂಬಸ್ಥರು ಹಾಗೂ ವರನ ಕಡೆಯವರು ಎಷ್ಟೇ ಪ್ರಯತ್ನಿಸಿದರೂ ಆಕೆ ತನ್ನ ನಿಲುವನ್ನು ಬದಲಾಯಿಸಿದೆ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ವರನ ಕಡೆಯವರು ಕೋಪಗೊಂಡಿದ್ದು, ಎರಡು ಕುಟುಂಬದ ನಡುವೆ ವಾಗ್ವಾದ ಏರ್ಪಟ್ಟಿದೆ. ಆ ವೇಳೆ ವರನ ಕಡೆಯವರು ವಧುವಿನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ವಧುವಿನ ಕಡೆಯವರು ಹಾಗೂ ವರನ ಕಡೆಯವರು ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ವರ ಮತ್ತು ವಧುವಿನ ಕಡೆಯವರು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿ ಇರುವಂತಾಗಿದೆ.