ಸಮಗ್ರ ನ್ಯೂಸ್ : ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಹತ್ಯೆಗೈದ ಆರೋಪಿಗೆ ಉಗ್ರ ಶಿಕ್ಷೆ ನೀಡುವಂತೆ ನಂಜನಗೂಡಿನ ಕ್ರಾಂತಿಕಾರಿ ಲಿಂಗಾಯಿತ ವೀರಶೈವ ಬಳಗದ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಳಗದ ಅಧ್ಯಕ್ಷ ಜಗದೀಶ್ ಹಾಗೂ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಸವಣ್ಣ, ನಗರಸಭಾ ಮಾಜಿ ಅಧ್ಯಕ್ಷ ಮಹದೇವಸ್ವಾಮಿ ಇಂದು ತಾಲ್ಲೂಕು ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಇದೊಂದು ಹೇಯ ಕೃತ್ಯ ಯಾವುದೇ ಸಮಾಜದ ಹೆಣ್ಣು ಮಕ್ಕಳಿಗೂ ಇಂತಹ ಪರಿಸ್ಥಿತಿ ಬರಬಾರದು. ಕಾಂಗ್ರೆಸ್ ಸರ್ಕಾರ ವೋಟಿಗಾಗಿ ಒಂದು ವರ್ಗವನ್ನು ಓಲೈಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಘಟನೆ ನಡೆದ ಬಳಿಕ ಸಿಎಂ ಹಾಗೂ ಗೃಹ ಮಂತ್ರಿಗಳು ಇದು ಅವರ ವೈಯಕ್ತಿಕ ವಿಚಾರ ಎಂದು ಉಡಾಫೆಯ ಉತ್ತರ ನೀಡಿರುವುದು ನಿಜಕ್ಕೂ ಖಂಡನೀಯ.
ಒಬ್ಬ ಕಾರ್ಪೊರೇಟರ್ ಮಗಳಿಗೇ ಈ ರೀತಿ ಆದರೆ, ಇನ್ನು ಜನಸಾಮಾನ್ಯರ ಗತಿ ಏನು? ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರ ಇಂಥವರ ವಿರುದ್ಧ ಉಗ್ರ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಯಾಗಬೇಕು.
ಇನ್ನು ರಾಜ್ಯದಲ್ಲಿ ಲವ್ ಜಿಹಾದಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇವೆ ಇದನ್ನು ತಡೆಗಟ್ಟಬೇಕು. ನಮ್ಮ ಎಲ್ಲಾ ಸಮಾಜದ ಮಠಾಧಿಪತಿಗಳು ಮುಂಚೂಣಿಗೆ ಬಂದು ಘಟನೆಯನ್ನು ತೀವ್ರವಾಗಿ ಖಂಡಿಸುವ ಮೂಲಕ ಆರೋಪಿಗೆ ಶಿಕ್ಷೆ ಕೊಡಿಸಿ. ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಮಹದೇವಪ್ರಸಾದ್, ಮುಖಂಡರಾದ ವಿನಯ್, ಮಹೇಶ್, ಗುರುಸ್ವಾಮಿ, ಗಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.