ಸಮಗ್ರ ನ್ಯೂಸ್: ಉರಗ ಲೋಕದ ಇತಿಹಾಸದಲ್ಲಿ ಮತ್ತೊಂದು ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ವಿಶೇಷವೆಂದರೆ ಈ ಬಾರಿ ಭಾರತದಲ್ಲಿ ಈ ಗಮನಾರ್ಹ ಸಂಗತಿ ಬೆಳಕಿಗೆ ಬಂದಿದೆ.
ಹಾವುಗಳ ಸಂತತಿಯಲ್ಲಿ ಆರು ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಸುಮಾರು 43 ಅಡಿ ಉದ್ದದ ಟಿಟನೋಬೋವಾ ಎಂದು ಹಾವು ವಿಶ್ವದ ಅತಿ ಉದ್ದನೆಯ ಹಾವು ಎಂದು ಗುರುತಿಸಲಾಗಿತ್ತು. ಆದರೆ ಇದೀಗ ಅದಕ್ಕಿಂತಲೂ ಉದ್ದನೆಯ ಹಾವಿನ ಪಳೆಯುಳಿಕೆ ಭಾರತದಲ್ಲಿ ಕಂಡುಬಂದಿದೆ. ಸಂಶೋಧಕರು ಈ ಬಗ್ಗೆ ಸಂಶೋಧನೆ ಮುಂದುವರಿಸಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಿದೆ.
ಇದು ಬೇರಾವ ಸರ್ಪ ಅಲ್ಲ ಎಲ್ಲರೂ ಕೇಳಿರುವಂಥ ವಾಸುಕಿ ಸರ್ಪ. ಹೌದು, ನಮ್ಮ ಪುರಾಣ ಕಥೆಗಳಲ್ಲಿ ಇದರ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಆಗ ಇಷ್ಟು ದೊಡ್ಡ ಸರ್ಪ ನಿಜವಾಗಿಯೂ ಇರುತ್ತವಾ ಎಂದು ನಿಮಗೆ ಅನಿಸಿರಬಹುದು. ಆದರೆ ಇದು ನಿಜ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಗುಜರಾತ್‌ನ ಕಚ್‌ನ ಕಲ್ಲಿದ್ದಲು ಗಣಿಯಲ್ಲಿ ಸುಮಾರು 27 ಭಾರೀ ಗಾತ್ರದ ಪಳೆಯುಳಿಕೆಗಳು ಪತ್ತೆಯಾಗಿವೆ. ಮೊದಲ ಬಾರಿಗೆ 2005ರಲ್ಲಿ ಈ ಪಳೆಯುಳಿಕೆಗಳು ಕಾಣಿಸಿಕೊಂಡಿದ್ದು, ಅಂದಿನಿಂದ ಸಂಶೋಧನೆ ಜಾರಿಯಲ್ಲಿದೆ. ಇಷ್ಟು ಕಾಲ ಇದೊಂದು ದೈತ್ಯ ಮೊಸಳೆಯ ಪಳೆಯುಳಿಕೆ ಇರಬಹುದು ಎನ್ನುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲಾಗುತ್ತಿತ್ತು. ಆದರೆ ಇದೀಗ ಅದೊಂದು ದೊಡ್ಡ ಹಾವು ಎಂದು ತಿಳಿದುಬಂದಿದೆ.
ಈ ಹಾವು 36-50 ಅಡಿ ಉದ್ದ ಇರಬಹುದು, ಇದರ ತೂಕ ಸಾವಿರ ಕೆಜಿ. ಈ ಹಾವನ್ನು ಇದೀಗ ವಾಸುಕಿ ಇಂಡಿಕಸ್ ಎಂದು ಕರೆಯಲಾಗುತ್ತಿದೆ. ಈ ಹಾವು ಸಾವಿರ ಕೆಜಿವರೆಗೂ ಇದ್ದ ಕಾರಣ, ನಿಧಾನವಾಗಿ ನಡೆಯುತ್ತಿತ್ತು. ನೀರಿಗಿಂತ ಹೆಚ್ಚಾಗಿ ಭೂಮಿಯಲ್ಲೇ ಇದರ ವಾಸವಾಗಿತ್ತು. ಮರಗಳನ್ನು ಏರಲು ಇದಕ್ಕೆ ಸಾಧ್ಯವಾಗುತ್ತಿರಲಿಲ್ಲ. ದೊಡ್ಡದಾಗಿ ನಿಧಾನಗತಿಯಲ್ಲಿ ನಡೆಯುವ ಹಾವಾದರೂ ಇದು ಅತ್ಯಂತ ಡೇಂಜರಸ್ ಹಾವು.
ವಾಸುಕಿ ನಾಗವನ್ನು ದೇವರೆಂದು ಪೂಜಿಸಲಾಗುತ್ತದೆ. ಇದು ಸರ್ಪಗಳ ರಾಜ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ಜಗಳದಲ್ಲಿ ವಾಸುಕಿ ಸರ್ಪವನ್ನು ಹಗ್ಗವಾಗಿ ಬಳಸಿ ಪರ್ವತ ಮಂಥನ ಮಾಡಲಾಗಿತ್ತು ಎನ್ನಲಾಗಿದೆ. ಇನ್ನು ಶ್ರೀಕೃಷ್ಣದೇವನನ್ನು ಕಂಸನಿಂದ ಕಾಪಾಡಲು ಕೃಷ್ಣನ ತಂದೆ ನೀರಿನಲ್ಲಿ ನಡೆಯುವಾಗ ಮಳೆಯಿಂದ ಕೃಷ್ಣನನ್ನು ರಕ್ಷಿಸಿದ್ದು ಇದೇ ಸರ್ಪ ಎನ್ನುವ ನಂಬಿಕೆಯಿದೆ.