ಸಮಗ್ರ ನ್ಯೂಸ್ : ಮಕ್ಕಳ ಹುಟ್ಟುಹಬ್ಬವೆಂದರೆ ಧಾಂಧೂಂ ಎಂದು ಆಚರಿಸೋದು ಈಗಿನ ಟ್ರೆಂಡ್. ಕೇಕ್ ಕಟ್ಟಿಂಗ್, ತಿಂದು ಮಿಕ್ಕಿ ಎಸೆಯುವಷ್ಟು ಊಟೋಪಾಚಾರ ಮಾಡಿ ಸಿಕ್ಕಾಪಟ್ಟೆ ಖರ್ಚು ಮಾಡುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅನಾಥಾಶ್ರಮಕ್ಕೆ ವಸ್ತು ಪರಿಕರಗಳನ್ನು ನೀಡಿ ವಿಭಿನ್ನವಾಗಿ ಆಚರಿಸಿದ್ದಾರೆ.
ಹೌದು… ಕೇರಳ ಮೂಲದ, ಸದ್ಯ ಲಂಡನ್ ವಾಸಿ ಸಾಫ್ಟ್‌ವೇರ್ ಇಂಜಿನಿಯರ್ ಅಭಿಜಿತ್ ಎಂಬವರ ಮಗು ಕ್ರಿಶ್ ಅಭಿಜಿತ್ ನಾರಾಯಣ್ ಹುಟ್ಟುಹಬ್ಬ ಇತ್ತೀಚೆಗೆ ತಾನೇ ನಡೆದಿತ್ತು. ತಮ್ಮ ಮಗುವಿನ ಮೊದಲ ಹುಟ್ಟುಹಬ್ಬ ವಿಶಿಷ್ಟವಾಗಿ ನಡೆಯಬೇಕೆಂದು ಅಭಿಜಿತ್ – ವೀಣಾ ದಂಪತಿ ಅಂದ್ಕೊಂಡಿದ್ದಾರೆ. ಅದಕ್ಕಾಗಿ ಮಂಗಳೂರಿನ ಬಿಜೈನಲ್ಲಿರುವ ಸ್ನೇಹದೀಪ ಆಶ್ರಮಕ್ಕೆ ಅಗತ್ಯವಿರುವ ವಸ್ತು ಪರಿಕರಗಳನ್ನು ನೀಡಿದ್ದಾರೆ. ವಾಷಿಂಗ್ ಮಿಷಿನ್, ಸ್ಯಾನಿಟರಿ ಪ್ಯಾಡ್, ಹಣ್ಣು-ಹಂಪಲು, ದಿನಸಿ ಸಾಮಾಗ್ರಿ, ಚಾಕಲೇಟ್ ಹೀಗೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.
ಅಭಿಜಿತ್ ಹೀಗೆ ಆಶ್ರಮಗಳಿಗೆ ವಸ್ತುಗಳನ್ನು ನೀಡಲು ತಮ್ಮ ಸ್ನೇಹಿತ ಶರಣ್ ರಾಜ್ ಕೆ.ಆರ್. ಅವರ ಸೇವಾ ಕಾರ್ಯವೇ ಸ್ಪೂರ್ತಿಯಂತೆ. ಶರಣ್ ರಾಜ್ ತಮ್ಮ ಸೇವಾ ಚಟುವಟಿಕೆಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದರಿಂದಲೇ ಸ್ಪೂರ್ತಿ ಪಡೆದ ಅಭಿಜಿತ್ ತಮ್ಮ ಮಗುವಿನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಇವರ ಈ ಕಾರ್ಯಕ್ಕೊಂದು ಹ್ಯಾಟ್ಸ್ಆಫ್ ಎನ್ನೋಣವೇ.