ಸಮಗ್ರ ನ್ಯೂಸ್ : ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದೆ, ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಮೂರ್ತಿಗೆ ಹಾರಾರ್ಪಣೆ ಮಾಡಿರುವುದು ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, 2013ರಲ್ಲಿ ಚುನಾವಣಾ ಪೂರ್ವದಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಸುಳ್ಳು ಭರವಸೆ ನೀಡಿದಂತೆ, ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆಯೊಂದಿಗೆ ರೋಡ್ ಶೋ ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಜುಮ್ಲಾದಂತೆ ಎಂದು ಲೇವಡಿ ಮಾಡಿದರು.
ಎರಡು ವರ್ಷಗಳ ಹಿಂದೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದೆ ಅವಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಶಾಲಾ ಪಠ್ಯ ಪುಸ್ತಕದಿಂದ ನಾರಾಯಣ ಗುರು ಮಾತ್ರವಲ್ಲದೆ, ಬಸವಣ್ಣ, ಕುವೆಂಪು ಮೊದಲಾದ ಮಹನೀಯರ ಪಠ್ಯವನ್ನು ಕೈಬಿಟ್ಟವರು ಈಗ ಚುನಾವಣೆಯ ಸಂದರ್ಭದಲ್ಲಿ ಇಂತಹ ಗಿಮಿಕ್ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ದಾಖಲೆ ನಿರ್ಮಿಸಲಿದೆ. ದ.ಕ. ಮತ್ತು ಉಡುಪಿ ಕ್ಷೇತ್ರವನ್ನು ಕೂಡಾ ಕೈವಶ ಮಾಡಿಕೊಳ್ಳುವ ಭರವಸೆ ವ್ಯಕ್ತವಾಗಿದೆ. ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಮಂಡ್ಯ ಮತ್ತು ಕೋಲಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಜಿಲ್ಲೆಯ ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಾರ್ಯಕ್ರಮ ಜಾತ್ರೆಯ ಕಾರಣ ಮುಂದೂಡಲಾಗಿದ್ದು, ಶೀಘ್ರದಲ್ಲೇ ಆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಒಂದು ರಾಷ್ಟ್ರ, ಒಂದು ಭಾಷೆ, ಒಂದು ಚುನಾವಣೆ, ಒಂದು ಧರ್ಮ ಇವೆಲ್ಲವೂ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಸಂವಿಧಾನ ಬದಲಾಯಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವರೂ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಆಡಳಿತದ ಈ ವ್ಯವಸ್ಥೆಯಲ್ಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸರಕಾರ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದಿದೆ. ಚುನಾವಣೆಯ ವೇಳೆ ಅದನ್ನು ಯಾರೂ ನಂಬಿರಲಿಲ್ಲ. ಉಡುಪಿಯ ಜಿಲ್ಲಾ ನಾಯಕರೊಬ್ಬರು ಈ ಗ್ಯಾರಂಟಿ ಜಾರಿಯಾದರೆ ನಾನು ತಲೆ ಬೋಳಿಸಿ ವಿಧಾನ ಸೌಧದ ಎದುರು ಕೂರುವುದಾಗಿ ಹೇಳಿದ್ದರು. ಗ್ಯಾರಂಟಿ ಅನುಷ್ಠಾನದ ಬಳಿಕ ಕೊಪ್ಪದ ಶಾಸಕರ ಎಲ್ಲಾ ಬ್ರಾಂಡ್‌ಗಳ ಬ್ಲೇಡ್‌ಗಳನ್ನು ಅವರಿಗೆ ಕಳುಹಿಸಲಾಗಿತ್ತು. ಶೇ. 10ರಿಂದ 15ರಷ್ಟು ಬಿಜೆಪಿ ಮತಗಳು ನಮಗೆ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಬೇಟಿ ಪಡಾವೊ ಬೇಟಿ ಬಚಾವೊ ಎಂದು ಘೋಷಣೆ ಕೂಗುತ್ತಾರೆ. ಆದರೆ ಶಾಲೆಯಲ್ಲಿ ಹೆಣ್ಣು ಮಕ್ಕಳ ಶಾಲಾ ಶುಲ್ಕ ಕಟ್ಟುವುದು ಕಾಂಗ್ರೆಸ್, ಅವರಿಗೆ ಸಮವಸ್ತ್ರ ಪುಸ್ತಕ ಕೊಡುವುದು ನಾವು, ಫ್ಲೆಕ್ಸ್ ಮಾತ್ರ ಅವರದ್ದು. ಸ್ವಚ್ಛ ಭಾರತ್‌ನಲ್ಲಿ ಪೊರಕೆ ನಮ್ಮದು, ಗುಡಿಸುವುದು ನಾವು, ಕಸ ಎತ್ತುವುದು ನಾವು ಪ್ರಚಾರ ಅವರದ್ದು. ನೀಡಿರುವ ಯಾವುದೇ ಆಶ್ವಾಸನೆಯನ್ನು ಬಿಜೆಪಿ ಈಡೇರಿಸಿಲ್ಲ. ಹಾಗಾಗಿ ಜನ ಮೋದಿಯವರ ಗ್ಯಾರಂಟಿಯನ್ನು ನಂಬುತ್ತಾರೆಯೋ, ಕಾಂಗ್ರೆಸ್‌ನ ಗ್ಯಾರಂಟಿ ನಂಬುತ್ತಾರೆಯೋ ಎಂಬುದು ನೋಡಬೇಕಿದೆ ಎಂದು ವಿನಯ ಕುಮಾರ್ ಸೊರಕೆ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಶಾಲೆಟ್ ಪಿಂಟೋ, ಕೃಷ್ಣಪ್ಪ, ನೀರಜ್ ಪಾಲ್, ಟಿ.ಎಂ. ಶಹೀದ್, ಯೋಗೀಶ್ ಕುಮಾರ್, ಟಿ.ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.