ಸಮಗ್ರ ನ್ಯೂಸ್: ರಾಜ್ಯ ಮಾನವ ಹಕ್ಕು ಆಯೋಗದ ಹಂಗಾಮಿ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಟಿ.ಶ್ಯಾಂ ಭಟ್ ಅವರನ್ನು ನೇಮಕ ಮಾಡಲಾಗಿದೆ. 2023ರ ನವೆಂಬರ್‍ನಲ್ಲಷ್ಟೇ ನಿವೃತ್ತ ನ್ಯಾ. ಎಲ್.ನಾರಾಯಣಸ್ವಾಮಿ ಅವರನ್ನು ಸರ್ಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ, ಕಳೆದ ಫೆಬ್ರವರಿಯಲ್ಲಿ ನ್ಯಾ. ಎಲ್.ನಾರಾಯಣಸ್ವಾಮಿ ಅವರು ಲೋಕಪಾಲದ ನ್ಯಾಯಾಂಗ ಸದಸ್ಯರಾಗಿ ನೇಮಕರಾಗಿದ್ದು, ಅದಾದ ನಂತರ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು.
ಹೀಗಾಗಿ ಕಳೆದ ಒಂದೂವರೆ ತಿಂಗಳಿಗಿಂತ ಹೆಚ್ಚು ಕಾಲ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಸ್ಥಾನ ಖಾಲಿಯಿತ್ತು. ಇದೀಗ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯರೂ ಆಗಿರುವ ಡಾ. ಟಿ.ಶ್ಯಾಂ ಭಟ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.
2022ರ ಆ. 11ರಿಂದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನ, 2020ರ ಮೇ 8ರಿಂದ ಮತ್ತು 2022ರ ಡಿ. 28ರಿಂದ ಕ್ರಮವಾಗಿ ಎರಡು ಸದಸ್ಯ ಸ್ಥಾನ ಖಾಲಿಯಿತ್ತು. ಈ ಕುರಿತಂತೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಅದನ್ನಾಧರಿಸಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿ ಖಾಲಿ ಇರುವ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ನೇಮಕ ಮಾಡುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ 2023ರ ನವೆಂಬರ್ 27ರಂದು ನ್ಯಾ. ಎಲ್.ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ, ಡಾ. ಟಿ.ಶ್ಯಾಂ ಭಟ್ ಮತ್ತು ನಿವೃತ್ತ ನ್ಯಾ. ಎಸ್.ಕೆ.ವಂಟಿಗೋಡಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿತ್ತು.