ಸಮಗ್ರ ನ್ಯೂಸ್ : ಏಪ್ರಿಲ್ 14 ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ರೋಡ್ ಶೋ ನಡೆಯುವ ಮಾರ್ಗದ ಮೇಲೆ ಎಸ್ ಪಿ ಜಿ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ.
ಸ್ಥಳೀಯ ಪೊಲೀಸರು, ಶ್ವಾನ ದಳ, ಹಾಗೂ ಮೆಟಲ್ ಡಿಟೆಕ್ಟರ್ ಬಳಸಿ ರಸ್ತೆಯ ಇಕ್ಕಲೆ ಇಕ್ಕಲೆಗಳಲ್ಲೂ ತಪಾಸಣೆ ನಡೆಸುತ್ತಿದ್ದಾರೆ. ಎಸ್ ಪಿ ಜಿ ಟೀಂ ರೋಡ್ ಶೋ ಸಾಗುವ ದಾರಿಯ ಇಕ್ಕಲೆಗಳ ಎಲ್ಲ ಕಟ್ಟಡಗಳ ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ಮುಖ್ಯವಾಗಿ ಭದ್ರತಾ ವೈಫಲ್ಯವಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಮಂಗಳೂರು ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ರೋಡ್ ಶೋ ಆರಂಭವಾಗಲಿದೆ. ನಾರಾಯಣ ಗುರು ವೃತ್ತದಿಂದ ನವಭಾರತ್ ಸರ್ಕಲ್ ವರೆಗೂ ರೋಡ್ ಶೋ ಸಾಗಲಿದೆ.
ಸುಮಾರು 2 ಕಿಮಿ ಉದ್ದದ ರೋಡ್ ಶೋ ಹಿನ್ನಲೆ ಶರವೇಗದಲ್ಲಿ ನಡೆಯುತ್ತಿರುವ ಬ್ಯಾರಿಕೇಡ್ ಅಳವಡಿಕೆ ಕಾರ್ಯ ಮುಂದುವರೆದಿದೆ. ಇನ್ನು ರೋಡ್ ಶೋ ಸಾಗುವ ದಾರಿಯ ಬದಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಎಸ್ ಪಿ ಜಿ ಅನುಮತಿ ಸಿಕ್ಕರೆ ಯಕ್ಷಗಾನ ನೃತ್ಯ ಸೇರಿದಂತೆ, ತುಳುನಾಡ ವೈಭವ ಅನಾವರಣಕ್ಕೆ ತಯಾರಿ ಮಾಡಲಿದೆ.