ಸಮಗ್ರ ನ್ಯೂಸ್: ರಾಜ್ಯ ರಾಜಕೀಯದಲ್ಲಿ ಒಕ್ಕಲಿಗ ಪಾಲಿಟಿಕ್ಸ್ ಇದೀಗ ಜೋರಾಗಿದೆ. ಒಕ್ಕಲಿಗ ಸಮುದಾಯದ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೆಳಗೆ ಇಳಿಸಿದ್ದು ಯಾರು? ಇದನ್ನು ಕೇಳುವ ಶಕ್ತಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಇದೆಯಾ? ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಯು ಈಗ ಮತ್ತೊಂದು ತಿರುವನ್ನು ಪಡೆದುಕೊಂಡಿದೆ. ಎಚ್‌ಡಿಕೆ ಅವರು ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ದರು ಎಂದು ಸಚಿವ ಎನ್. ಚಲುವರಾಯಸ್ವಾಮಿ ಆರೋಪ ಮಾಡಿದ್ದಾರೆ. ಇದಕ್ಕೆ ಎಚ್‌ಡಿಕೆ ತಿರುಗೇಟು ನೀಡಿದ್ದು, ನಾನು ಫೋನ್ ಟ್ಯಾಪಿಂಗ್ ಮಾಡುತ್ತಿದ್ದರೆ ನನ್ನ ಸರ್ಕಾರವನ್ನು ಏಕೆ ಬೀಳಿಸಿಕೊಳ್ಳುತ್ತಿದ್ದೆ ಎಂದು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ, ಬೇಕಿದ್ದರೆ ಮತ್ತೆ ತನಿಖೆ ಮಾಡಿಸಿಕೊಳ್ಳಲಿ ಎಂದು ಸವಾಲನ್ನು ಸಹ ಹಾಕಿದ್ದಾರೆ.
ಸ್ವಾಮೀಜಿ ಅವರನ್ನು ಭೇಟಿ ಮಾಡುವುದಕ್ಕೆ ಕಾಂಗ್ರೆಸ್‌ನವರು ಎಷ್ಟು ಜನ ಹೋಗಿದ್ದರು? ಇವರು ಏನು ಬೇಕಾದರೂ ಮಾಡಬಹುದು, ನಾವು ಮಾಡುವ ಹಾಗಿಲ್ಲವೇ? ಅದು ಕೂಡ ಒಂದು ದೊಡ್ಡ ರಾಜಕೀಯನಾ? ವರ್ಷದ ಮೊದಲ ದಿನ ನಮ್ಮ ಸಮುದಾಯದ ಗುರು ಹಿರಿಯರ ಆಶೀರ್ವಾದ ಪಡೆಯುತ್ತೇವೆ. ಅದೇನು ಮಹಾ ಅಪರಾಧವಾ? ಜ್ವರ ಬಂದಾಗ ಆಸ್ಪತ್ರೆಗೆ ಹೋಗದೆ ಇನ್ನೆಲ್ಲಿಗೆ ಹೋಗಲು ಸಾಧ್ಯ? ನಾನು 140 ಮಠಗಳಿಗೆ ಅನುದಾನ ನೀಡಿದ್ದೆ. ಮಠಗಳು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡಿದ್ದೆ. ಇದೇನು ಹೊಸದಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಜೆಡಿಎಸ್ ಎಲ್ಲಿದೆ ಎನ್ನುವ ದುರಹಂಕಾರದ ಮಾತುಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಆಡುತ್ತಿದ್ದಾರೆ. ಇವರ ಸಹವಾಸ ಮಾಡಿದ್ದಕ್ಕೆ ಈಗ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟರಲ್ಲ, ಅದಕ್ಕೆ ಮರು ಜೀವ ಕೊಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಪಕ್ಕದಲ್ಲಿಯೇ ಕುಳಿತು ಹಳ್ಳ ತೋಡಿದರಲ್ಲ, ಎಲ್ಲವೂ ನೆನಪಿದೆ ನನಗೆ ಎಂದು ಎಚ್.ಡಿ. ಕುಮಾರಸ್ವಾಮಿ ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ.