ಸಮಗ್ರ ನ್ಯೂಸ್: ಕರ್ನಾಟಕ ಲೋಕಸಭಾ ಚುನಾವಣಾ ಪ್ರಚಾರ ಭರಾಟೆ ಹೆಚ್ಚುತ್ತಿದ್ದು, ಕೇಂದ್ರದಿಂದ ಹಾಗೂ ಅಕ್ಕಪಕ್ಕದ ನಾಯಕರಿಂದ ಘಟನಾನುಘಟಿ ನಾಯಕರನ್ನೇ ಕರೆತಂದು ಪ್ರಚಾರ ನಡೆಸಲು ಎನ್‍ಡಿಎ ನಾಯಕರು ನಿರ್ಧರಿಸಿದ್ದಾರೆ.
ಆ ಹಿನ್ನೆಲೆಯಲ್ಲಿ, ಏ. 14ರಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರು, ಮಂಗಳೂರಿನಲ್ಲಿ ಪ್ರಚಾರ ನಡೆಸಿದರೆ, ಏ. 17ರಂದು ತೆಲುಗು ಸೂಪರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಬಳ್ಳಾರಿ ಹಾಗೂ ರಾಯಚೂರಿಗೆ ಹೋಗಿ ಅಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಬಿಜೆಪಿ ನಾಯಕ ರಾಜಾ ಅಮೇಶ್ವರ ನಾಯಕ್ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಅವರ ಜನಸೇನಾ ಪಾರ್ಟಿಯು ಎನ್ ಡಿಎ ಅಂಗಪಕ್ಷವಾಗಿರುವುದರಿಂದ ಅವರನ್ನು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ಯೋಚಿಸಿದೆ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ತೆಲುಗು ಭಾಷಿಗರು ಹೆಚ್ಚಾಗಿದ್ದಾರೆ. ಅಲ್ಲದೆ, ಅವರಿಗೂ ಸೇರಿದಂತೆ ಆ ಭಾಗದ ಜನರಿಗೆ ತೆಲುಗು ಸ್ಟಾರ್ ಗಳೆಂದರೆ ಅಚ್ಚುಮೆಚ್ಚು ಎಂಬ ಕಾರಣದಿಂದ ಈ ಪ್ರಚಾರ ತಂತ್ರವನ್ನು ಬಳಸಿಕೊಳ್ಳಲಾಗಿದೆ.