ಸಮಗ್ರ ನ್ಯೂಸ್ : ಕ್ಯಾಂಟೀನ್ ನೊಂದರಲ್ಲಿ ಸಮೋಸಾದೊಳಗೆ ಬ್ಯಾಂಡೇಜ್, ಕಾಂಡೋಮ್, ಕಲ್ಲುಗಳು ಮತ್ತು ತಂಬಾಕು ಮುಂತಾದ ವಸ್ತುಗಳು ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ರಹೀಮ್ ಶೇಖ್, ಅಜರ್ ಶೇಖ್, ಮಜರ್ ಶೇಖ್, ಅಜರ್ ಶೇಖ್ ಮತ್ತು ವಿಕ್ಕಿ ಶೇಖ್ ಆರೋಪಿಗಳೆಂದು ಗುರುತಿಸಲಾಗಿದೆ.
ಕಂಪನಿಯು ತಮ್ಮ ಒಪ್ಪಂದವನ್ನು ರದ್ದುಪಡಿಸಿದ ಕೋಪದಿಂದ ಆರೋಪಿಗಳೆಲ್ಲರೂ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಪುಣೆಯ ಚಿಖಾಲಿ ಮೂಲದ ಕಂಪನಿಯೊಂದರ ಅಧಿಕಾರಿ ಕೀರ್ತಿಕುಮಾರ್ ಶಂಕರರಾವ್ ದೇಸಾಯಿ ಅವರು ಏ.7 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಖಾಲಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ತಮ್ಮ ಕಂಪನಿಯು ಚಿಖಾಲಿಯ ಮತ್ತೊಂದು ದೊಡ್ಡ ಕಂಪನಿಯಿಂದ ಆಹಾರ ಪೂರೈಕೆಗಾಗಿ ಆದೇಶವನ್ನು ಪಡೆದಿದೆ. ಅದರಂತೆ ಕೀರ್ತಿಕುಮಾರ್ ಅವರು ರಹೀಮ್ ಖಾನ್ ಮಾಲೀಕತ್ವದ SRS ಎಂಟರ್ ಪ್ರೈಸಸ್ ಹೆಸರಿನ ಕಂಪನಿಯೊಂದಿಗೆ ಸಮೋಸಾ ಪೂರೈಕೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕೀರ್ತಿಕುಮಾರ್ ಪ್ರಕಾರ , ಒಂದು ದಿನ SRS ಕಂಪನಿಯಿಂದ ಸರಬರಾಜಾಗುತ್ತಿದ್ದ ಸಮೋಸದಲ್ಲಿ ಗಾಯಗಳಿಗೆ ಹಾಕುವ ಬ್ಯಾಂಡೇಜ್ ಪತ್ತೆಯಾಗಿದೆ. ಸಿಬ್ಬಂದಿಯಿಂದ ಈ ಕುರಿತು ದೂರು ಸ್ವೀಕರಿಸಿದ ಕೀರ್ತಿಕುಮಾರ್ ಅವರ ಕಂಪನಿಯು ಎಸ್‌ಆರ್‌ಎಸ್‌ನೊಂದಿಗಿನ ಒಪ್ಪಂದವನ್ನು ಮುರಿದುಕೊಳ್ಳಲಾಯಿತು. ಬಳಿಕ ಪುಣೆ ಮೂಲದ ಮತ್ತೊಂದು ಕಂಪನಿಯಾದ ಮನೋಹರ್ ಎಂಟರ್‌ಪ್ರೈಸಸ್‌ಗೆ ಸಮೋಸಾಗಳನ್ನು ಪೂರೈಸಲು ಸೂಚನೆ ನೀಡಿತು. ಇದರಿಂದ ಸಿಟ್ಟಿಗೆದ್ದ SRS ಮಾಲೀಕ ರಹೀಮ್ ಖಾನ್ ತನ್ನ ಸಹಚರರಾದ ಅಜರ್ ಶೇಖ್ ಮತ್ತು ಮಜರ್ ಶೇಖ್ ಜೊತೆ ಸೇರಿ ದೊಡ್ಡ ಸಂಚು ರೂಪಿಸಿದ್ದರು.
ಅದರಂತೆ ಮಾರ್ಚ್ 27 ರಂದು ರಹೀಮ್ ಖಾನ್, ತನ್ನ ಕೆಲಸಗಾರರಿಗೆ ಕಾಂಡೋಮ್‌ಗಳು, ಗುಟ್ಕಾ ಮತ್ತು ಕಲ್ಲುಗಳನ್ನು ಸಮೋಸಾಳ ಒಳಗೆ ತುಂಬಲು ಸೂಚಿಸಿದ್ದಾನೆ. ಬಳಿಕ ಒಪ್ಪದ ಕೊನೆಗೊಳಿಸಲು ಮುಂದಾದ ಕಂಪನಿಗೆ ಬೆಳಗ್ಗೆ 7:30 ರಿಂದ 9 ರ ನಡುವೆ ಈ ಸಮೋಸಗಳನ್ನು ವಿತರಿಸಿದರು. ಈ ವೇಳೆ ಕಾಂಡೋಮ್, ಗುಟ್ಕಾ ಮೊದಲಾದ ವಸ್ತುಗಳು ಸಿಕ್ಕಿವೆ. ಈ ಕುರಿತು ಸಿಬ್ಬಂದಿಯು ಕೀರ್ತಿಕುಮಾರ್ ಅವರಿಗೆ ದೂರು ನೀಡಿದ್ದಾರೆ. ಕೂಡಲೇ ಕೀರ್ತಿ ಕುಮಾರ್ ಅವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ರಹೀಮ್ ಶೇಖ್, ಫಿರೋಜ್ ಶೇಖ್, ವಿಕ್ಕಿ ಶೇಖ್, ಅಜರ್ ಶೇಖ್ ಮತ್ತು ಮಜರ್ ಶೇಖ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 328 (ವಿಷದ ಮೂಲಕ ನೋವುಂಟುಮಾಡುವುದು), 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.