ಸಮಗ್ರ ನ್ಯೂಸ್: ಅಕ್ರಮ ಮದ್ಯ ನೀತಿ ಹಗರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆಯ ಕುರಿತಾದ ದೆಹಲಿ ಹೈಕೋರ್ಟ್ ನ ತೀರ್ಪು ಇಂದು (ಏಪ್ರಿಲ್ 9) ಪ್ರಕಟಿಸಲಿದೆ.
ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಅವರು ತನ್ನ ಬಂಧನ ಮತ್ತು ಇ.ಡಿ ರಿಮ್ಯಾಂಡ್ ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ನಡೆಸುತ್ತಿರುವ ಹೈಕೋರ್ಟ್‍ನ ನ್ಯಾ. ಸ್ವರಾನಾ ಕಾಂತ ಶರ್ಮಾ ಅವರುಳ್ಳ ಪೀಠ, ಇಂದು ಅಪರಾಹ್ನ 2.30ರ ಸುಮಾರಿಗೆ ತೀರ್ಪು ಪ್ರಕಟಿಸಲಿದ್ದಾರೆ.
ಚುನಾವಣೆಯ ಸಂದರ್ಭ ತಮ್ಮನ್ನು ಬಂಧಿಸಿರುವ ಕ್ರಮವು ಈ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು. ಇದರಿಂದ ರಾಜಕೀಯ ಪ್ರತಿರೋಧಗಳ ವಿರುದ್ಧ ಹೋರಾಡುವ ಅವಕಾಶದಿಂದ ವಂಚಿತವಾದಂತಾಗಿದೆ ಎಂದು ಕೇಜ್ರವಾಲ್ ಅರ್ಜಿಯಲ್ಲಿ ವಾದಿಸಿದ್ದಾರೆ.
ಇತ್ತ ಜಾರಿ ನಿರ್ದೇಶನಾಲಯ (ಇ.ಡಿ) ಈ ವಾದವನ್ನು ತಳ್ಳಿ ಹಾಕಿದ್ದು, ಮುಂಬರುವ ಚುನಾವಣೆಗಳ ಆಧಾರದ ಮೇಲೆ ಕೇಜ್ರೀವಾಲ್ ಅವರಿಗೆ ಬಂಧನದಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಕಾನೂನು ಅವರಿಗೆ ಮತ್ತು ಜನ ಸಾಮಾನ್ಯರಿಗೆ ಒಂದೇ ರೀತಿಯಲ್ಲಿ ಅನ್ವಯವಾಗುತ್ತದೆ ಎಂದು ಹೇಳಿದೆ.
ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಬ್ರಿವಾಲ್ ಅವರನ್ನು ಮಾರ್ಚ್ 21ರಂದು ಇ.ಡಿ ಬಂಧಿಸಿತ್ತು. ನ್ಯಾಯಾಲಯದ ಆದೇಶದ ಪ್ರಕಾರ 10 ದಿನಗಳ ಕಾಲ ಇ.ಡಿ ವಶದಲ್ಲಿದ್ದರು. ಬಳಿಕ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು.