ಸಮಗ್ರ ನ್ಯೂಸ್ : ನಮ್ಮ ಹೋರಾಟ ಸರ್ವಾಧಿಕಾರಿ ಆಡಳಿತ ಹಾಗೂ ಭ್ರಷ್ಟ ಕೇಂದ್ರ ಸರಕಾರದ ವಿರುದ್ಧ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.
ದೇವರಹಿಪ್ಪರಗಿ ಮತಕ್ಷೇತ್ರದ ಹುಣಶ್ಯಾಳದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ರೈತರ ಹಿತ ಕಾಪಾಡದ ಪ್ರಧಾನಿ ಮೋದಿಯವರು ಮೊದಲ ಸಲ ಆರಿಸಿ ಬಂದ ನಂತರ ಹೇಳಿದ್ದ ಯಾವ ಮಾತನ್ನೂ ಉಳಿಸಿಕೊಂಡಿಲ್ಲ. ಅದರ ಬದಲು ಅವರು ಜನರ ಜೀವನ ಕಸಿದುಕೊಂಡಿದ್ದಾರೆ. ಹಿಂದಿನ ನಮ್ಮ ಕೆಟ್ಟ ದಿನಗಳೇ ಒಳ್ಳೆಯದಾಗಿದ್ದವು ಎಂದು ಹೇಳಿದರು.
ರಾಜ್ಯ ಸರಕಾರದಂತೆ ಕೇಂದ್ರದಲ್ಲೂ ಗ್ಯಾರಂಟಿಗಳ ಪರ್ವ ಆರಂಭವಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ವರ್ಷಕ್ಕೆ ಒಂದೂವರೆ ಲಕ್ಷ ರೂ. ಮೇಲ್ಪಟ್ಟು ಹಣ ಬರಲಿದೆ. ಈ ದುರ್ಭರ ಬೆಲೆ ಏರಿಕೆ ದಿನಗಳ ಕಡು ಕಷ್ಟ ಮರೆಯಾಗಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿ, ದೇಶವನ್ನು ಉಳಿಸಿ. ಅದಾಗದೇ ಈ ಬಾರಿಯೂ ಮೋದಿ ಗೆದ್ದರೆ ದೇಶದ ಪ್ರಜಾಪ್ರಭುತ್ವವೇ ನಾಶವಾಗಿ, ನ್ಯಾಯಯುತ ಚುನಾವಣೆಗಳೇ ನಡೆಯದಿರುವ ಸ್ಥಿತಿ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಮಾತನಾಡಿ, ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿಯವರ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬಿಜೆಪಿಯವರಿಗೆ ಕೇಳುವ ನೈತಿಕ ಹಕ್ಕಿಲ್ಲ. ಕೊಟ್ಟಿರುವ ಯಾವ ಭರವಸೆಯನ್ನೂ ಅವರು ಈಡೇರಿಸಿಲ್ಲ. ಬರೀ ರಾಮ ಮಂದಿರ ಕಟ್ಟಿದರೆ ಮುಗಿಯಲಿಲ್ಲ, ಜನ ಸಾಮಾನ್ಯರ ಬದಕನ್ನು ಕಟ್ಟಬೇಕಿದೆ. ಬೆಲೆ ಏರಿಕೆಯಿಂದ ದೇಶದ ಜನ ತತ್ತರಿಸಿದ್ದಾರೆ. ಕಾಂಗ್ರೆಸ್ ಕಟ್ಟಿದ ದೇಶದ ಎಲ್ಲ ಸಂಸ್ಥೆಗಳನ್ನು ಮಾರುವುದೇ ಇವರ ಕೆಲಸವಾಗಿದೆ. ಅದಾನಿ, ಅಂಬಾನಿಗಳು ಇವರ ಖರೀದಿದಾರರಾಗಿದ್ದಾರೆ. ಕಾಂಗ್ರೆಸ್‌ಗೆ ಇತಿಹಾಸವಿದೆ. ಹಾಗಾಗಿ ಬದಲಾವಣೆ ಮತ್ತು ನಿಮ್ಮ ನೆಮ್ಮದಿಯ ಜೀವನಕ್ಕಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಮುಖಂಡರಾದ ಬಿ.ಎಸ್. ಪಾಟೀಲ ಯಾಳಗಿ, ಸುಭಾಶ ಛಾಯಾಗೋಳ, ಆನಂದಗೌಡ ದೊಡ್ಡಮನಿ, ಪ್ರಭುಗೌಡ ಪಾಟೀಲ, ಬ್ಲಾಕ್ ಅಧ್ಯಕ್ಷ ಬಶೀರ ಬೇಪಾರಿ, ಸಂಗನಗೌಡ ಹರನಾಳ, ಬಾಪುಗೌಡ ಪಾಟೀಲ, ಸಾಯಿಕುಮಾರ ಬಿಸನಾಳ, ತಾಪಂ ಮಾಜಿ ಅಧ್ಯಕ್ಷೆ ಲಲಿತಾ ದೊಡ್ಡಮನಿ, ರಾಜಶೇಖರ ಕುಚಬಾಳ, ದೇವರಹಿಪ್ಪರಗಿ ಬ್ಲಾಕ್ ಅಧ್ಯಕ್ಷೆ ಸರಿತಾ ನಾಯಕ, ಹೂವಿನ ಹಿಪ್ಪರಗಿ ಬ್ಲಾಕ್ ಅಧ್ಯಕ್ಷೆ ರಮೀಜಾ ನದಾಫ್, ಸಯ್ಯದ, ಲಿಂಗದಳ್ಳಿ, ಮಡಿವಾಳಪ್ಪ, ಜಗದೀಶ್ ಪಾಟೀಲ, ಹಯ್ಯಾಳಪ್ಪ ವಾಲೀಕಾರ, ರಮೇಶ ಕುಂಬಾರ, ಸಾಹೇಬಗೌಡ ಬಿರಾದಾರ ಅನೇಕರಿದ್ದರು.