ಸಮಗ್ರ ನ್ಯೂಸ್: ಭಾರತೀಯ ಐಟಿ ದೈತ್ಯ ಕಂಪನಿ ವಿಪ್ರೋದ ಸಿಇಒ ಥಿಯೆರಿ ಡೆಲಾಪೊರ್ಟೆ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ನೂತನ ಸಿಇಒ ಆಗಿ ಶ್ರೀನಿವಾಸ್ ಪಲ್ಲಿಯಾ ಅವರನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ನೇಮಕ ಮಾಡಲಾಗಿದೆ.
ಏಪ್ರಿಲ್ 6ರಿಂದ ಜಾರಿಗೆ ಬರುವಂತೆ ಡೆಲಾಪೊರ್ಟೆ ಅವರ ರಾಜೀನಾಮೆಯನ್ನು ವಿಪ್ರೋದ ಆಡಳಿತ ಮಂಡಳಿಯು ಅಂಗೀಕರಿಸಿದೆ ಮತ್ತು ಮೇ 31ರಂದು ವ್ಯವಹಾರದ ಅವಧಿಯ ಮುಕ್ತಾಯದಿಂದ ಅವರು ಕಂಪನಿಯ ಉದ್ಯೋಗದಿಂದ ಬಿಡುಗಡೆ ಹೊಂದುತ್ತಾರೆ ಎಂದು ವಿಪ್ರೋದ ಅಧ್ಯಕ್ಷ ರಿಷದ್ ಪ್ರೇಮ್‍ಜಿ ಹೇಳಿದ್ದಾರೆ.
ವಿಪ್ರೋದಲ್ಲಿ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಪಲ್ಲಿಯಾ, ಕಂಪನಿಯ ಅತಿದೊಡ್ಡ ಮಾರುಕಟ್ಟೆಯಾದ ಅಮೆರಿಕಾಸ್ 1ರ ಸಿಇಒ ಆಗಿದ್ದರು. ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ನಿಂದ ಮ್ಯಾನೇಜ್‍ಮೆಂಟ್ ಸ್ಟಡೀಸ್‍ನಲ್ಲಿ ಇವರು ಮಾಸ್ಟರ್ ಆಫ್ ಟೆಕ್ನಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೆಕ್‍ಗಿಲ್ ವಿಶ್ವವಿದ್ಯಾಲಯದಲ್ಲಿ ಅಡ್ವಾನ್ಸಡ್ ಲೀಡರ್‍ಶಿಪ್ ಪ್ರೋಗ್ರಾಂ ಹಾಗೂ ಹಾರ್ವರ್ಡ್ ವಿವಿಯಲ್ಲಿ ಜಾಗತಿಕ ನಾಯಕತ್ವ, ಕಾರ್ಯತಂತ್ರ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೋರ್ಸ್ ಮಾಡಿದ್ದಾರೆ.
ವಿಪ್ರೋದಲ್ಲಿ ಪ್ರೊಡಕ್ಟ್ ಮ್ಯಾನೇಜರ್ ಆಗಿ ವೃತ್ತಿ ಆರಂಭಿಸಿದ ಶ್ರೀನಿವಾಸ್, ಹಂತ ಹಂತವಾಗಿ ಉನ್ನತ ಹುದ್ದೆಗಳಿಗೆ ಏರಿದ್ದಾರೆ. ಅವರು ಆರ್‍ಸಿಟಿಜಿ ಬಿಜಿನೆಟ್ ಘಟಕದ ಮುಖ್ಯ ಕಾರ್ಯನಿರ್ವಾಹಕರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ.