ಕಾರವಾರ: ಜಲಪ್ರವಾಹದಿಂದ ದ್ವೀಪದಂತಾಗಿದ್ದ ಗ್ರಾಮದಿಂದ ಹೆರಿಗೆ ನೋವು ಬಂದ ಗರ್ಭಿಣಿಯನ್ನು ಸ್ಥಳೀಯ ಯುವಕರು ಬೋಟ್ ಮೂಲಕ ಸೂಕ್ತ ಸಮಯಕ್ಕೆ ಆಸ್ಪತ್ರೆ ಸೇರಿಸಿದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಮೌಳಂಗಿ ಗ್ರಾಮ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಜಾಲವೃತವಾಗಿತ್ತು. ಅದೇ ಸಮಯಕ್ಕೆ ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರಿಗೆ ತೀವ್ರ ಹೆರಿಗೆ ನೋವು ಬಂದಿದೆ. ಊರಿನ ಹೊರಗಿನ ನಗರದ ಆಸ್ಪತ್ರೆಗೆ ತೆರಳುವ ರಸ್ತೆಗಳೆಲ್ಲವು ಭಾರೀ ಮಳೆಗೆ ಸಂಪೂರ್ಣ ಜಾಲವೃತವಾಗಿದ್ದವು. ಮಹಿಳೆಯ ಕುಟುಂಬಕ್ಕೆ ದಿಕ್ಕು ತೋಚದೆ ಅಸಹಾಯಕ ಸ್ಥಿತಿ ಎದುರಾಗಿತ್ತು.
ಇದನ್ನು ಕಂಡ ಸ್ಥಳೀಯ ಯುವಕರ ಗುಂಪೊಂದು ಸಹಾಯಕ್ಕೆ ಧಾವಿಸಿದೆ. ಗ್ರಾಮ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಟ್ಯೂಬ್ ಬೋಟ್ ಒಂದರ ವ್ಯವಸ್ಥೆ ಮಾಡಿದ್ದಾರೆ. ಅದರ ಮೂಲಕ ಜಾಲವೃತಗೊಂಡ ಪ್ರದೇಶ ದಾಟಿಸಿ ಬಳಿಕ ವಾಹನದ ಮೂಲಕ ಗರ್ಭಿಣಿಯನ್ನು ಸರಿಯಾದ ಸಮಯಕ್ಕೆ ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.