ಸಮಗ್ರ ನ್ಯೂಸ್: ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆ ನೀಡುವ ಜೊತೆಗೆ ದೇಶದ ಗಮನ ಸೆಳೆಯುವ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ‘ನೋಟಾ’ಕ್ಕೆ ಮತ ಹಾಕಲು ಸೌಜನ್ಯಾ ಪರ ಹೋರಾಟಗಾರರು ಜಾಗೃತಿ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ಸೌಜನ್ಯಾ ಹೋರಾಟ ಸಮಿತಿ ಮುಖಂಡ ಗಿರೀಶ್ ಮಟ್ಟಣ್ಣನವರ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ‘ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆದ ಸೌಜನ್ಯಾ ಎಂಬ ಯುವತಿಯ ಹತ್ಯೆ ಪ್ರಕರಣದ ಮರು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ 11 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಪ್ರಮುಖ ರಾಜಕೀಯ ಪಕ್ಷಗಳಿಂದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ, ಹೆಣ್ಣು ಮಕ್ಕಳ ಸುರಕ್ಷತೆಯ ಕಾಳಜಿ ಇರುವ ರಾಜ್ಯದ ಎಲ್ಲ ಮತದಾರರು ಈ ಬಾರಿ ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕುವಂತೆ ಕರೆ ನೀಡುತ್ತಿದ್ದೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗ್ರಾಮ ಮಟ್ಟದಲ್ಲಿ ಸಭೆ ಹಮ್ಮಿಕೊಂಡು ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ’ ಎಂದರು.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಪ್ರಜಾಪ್ರಭುತ್ವ ವೇದಿಕೆ, ಸೌಜನ್ಯಾ ಹೋರಾಟ ಸಮಿತಿ ಜಂಟಿಯಾಗಿ ಈ ಆಂದೋಲನ ಹಮ್ಮಿಕೊಂಡಿವೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನೋಟಾ ಅಭಿಯಾನದ ಬೇಡಿಕೆಗಳನ್ನು ಏ.7ರಂದು ಪ್ರಣಾಳಿಕೆ ರೂಪದಲ್ಲಿ ಬಿಡುಗಡೆ ಮಾಡಲಾಗುವುದು. ಏ.24ರಂದು ಸುಳ್ಯದಲ್ಲಿ ಲೋಕಸಭಾ ಕ್ಷೇತ್ರ ಮಟ್ಟದ ನೋಟಾ ಜನಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು. ಹೋರಾಟಗಾರರಾದ ಪ್ರಸನ್ನ ರವಿ, ತಮ್ಮಣ್ಣ ಶೆಟ್ಟಿ, ಜಯನ್ ಇದ್ದರು.