ಸಮಗ್ರ ನ್ಯೂಸ್ : ಇತ್ತೀಚಿಗೆ ಹುಟ್ಟುಹಬ್ಬ ಆಗಿರಲಿ ಅಥವಾ ಸಭೆ ಸಮಾರಂಭಗಳಲ್ಲಿ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡುವುದು, ಹುಟ್ಟು ಹಬ್ಬದ ಸಂದರ್ಭದಲ್ಲಿ ತಲ್ವಾರ್ ಹಾಗೂ ಚಾಕುವಿನಿಂದ ಕೇಕ್ ಕತ್ತರಿಸುವುದು, ಒಂದು ಶೋಕಿಯಾಗಿ ಬಿಟ್ಟಿದೆ. ಇದೀಗ ಇದಕ್ಕೆ ಪೊಲೀಸರು ಕಡಿವಾಣ ಹಾಕುತ್ತಿದ್ದು ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ವ್ಯಕ್ತಿ ಒಬ್ಬ ತಲ್ವಾರ್ ನಿಂದ ಕೇಕ್ ಕತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಇದೀಗ ಆತನನ್ನು ಸೇಡಂ ಪೊಲೀಸರು ಬಂಧಿಸಿದ್ದಾರೆ.
ಸೇಡಂನ ಇಂದಿರಾನಗರದ ನಿವಾಸಿ ರಾಮು ಅಲಿಯಾಸ್ ರಮೇಶ ಇಂಜಳ್ಳಿಕರ್ ಎಂಬಾತ ಜನ್ಮದಿನದಂದು ತಲವಾರ್ವೊಂದನ್ನು ಹಿಡಿದುಕೊಂಡು ಡ್ಯಾನ್ಸ್ ಮಾಡಿ ಕೇಕ್ ಕತ್ತರಿಸುವ ವಿಡಿಯೋ ಮಾಡಿದ್ದಲ್ಲದೇ, ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸೇಡಂ ಠಾಣೆಯ ಪೊಲೀಸರು ಯುವಕನ ಮೇಲೆ ಪ್ರಕರಣ ದಾಖಲಿಸಿ ತಲವಾರ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತಂತೆ ಕಲಬುರ್ಗಿ ಜಿಲ್ಲಾ ಪೊಲೀಸ್ ಮಾಹಿತಿ ಹಂಚಿಕೊಂಡಿದ್ದು, ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾನಗರದಲ್ಲಿ ತಲವಾರ್ ಹಿಡಿದು ರಿಲ್ಸ್ ಮತ್ತು ಶಾರ್ಟ್ ವೀಡಿಯೋಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವ್ಯಕ್ತಿಯನ್ನು ವಶಕ್ಕೆ ಪಡೆದು ಭಾರತಿಯ ಆಯುಧ ಕಾಯ್ದೆ, 1959ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಯಿತು ಎಂದು ತಿಳಿಸಿದೆ.