ನವದೆಹಲಿ : ಮೊಬೈಲ್ ಆಯಪ್ನ ಮೂಲಕ ಮಹಿಳೆಯರ ಪರಿಚಯ ಬೆಳೆಸಿ, ಬೆತ್ತಲೆ ಚಿತ್ರ -ವಿಡಿಯೋಗಳನ್ನು ತರಿಸಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ ಯುವಕನೊಬ್ಬನು ದೆಹಲಿ ಪೊಲೀಸರ ವಶವಾಗಿದ್ದಾನೆ. ಖಿನ್ನತೆಯ ಸಮಸ್ಯೆ ಇರುವ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರನ್ನು ಈತ ತನ್ನ ಕಾಮದಾಹಕ್ಕೆ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ.
ಇಂಡೋನೇಷಿಯಾದ ಮಹಿಳೆಯೊಬ್ಬಳು ನೀಡಿದ ದೂರಿನ ಮೇಲೆ ದೆಹಲಿ ನಿವಾಸಿ, 21 ವರ್ಷ ವಯಸ್ಸಿನ ಆರೋಪಿ ಜತಿನ್ ಭಾರದ್ವಾಜ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು, ಮಾನಸಿಕ ಸಮಸ್ಯೆಯುಳ್ಳವರಿಗೆ ಬೆಂಬಲ ಒದಗಿಸುವ ವೇದಿಕೆ ಎನ್ನಲಾದ ‘ಟಾಕ್ ಲೈಫ್’ ಮೊಬೈಲ್ ಆ್ಯಪ್ಅನ್ನು ಬಳಸಿಕೊಂಡು, ದಕ್ಷಿಣ ಏಷಿಯಾ ದೇಶಗಳ ಮಹಿಳೆಯರನ್ನು ಆನ್ಲೈನ್ ಪರಿಚಯ ಮಾಡಿಕೊಳ್ಳುತ್ತಿದ್ದ.
ಅವರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಚಿತ್ರಗಳನ್ನು, ವಿಡಿಯೋಗಳನ್ನು ತರಿಸಿಕೊಳ್ಳುತ್ತಿದ್ದ. ನಂತರ ಅವನ್ನು ಲೀಕ್ ಮಾಡುವುದಾಗಿ ಬೆದರಿಸಿ ಇನ್ನಷ್ಟು ಸಾಮಗ್ರಿ ಕಳುಹಿಸಲು ಬಲವಂತ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿಯು 15 ಮಹಿಳೆಯರನ್ನು ಈ ರೀತಿ ಪುಸಲಾಯಿಸಿದ್ದು, ಮೂವರಿಂದ ಬೆತ್ತಲೆ ಚಿತ್ರಗಳು ಮತ್ತು ವಿಡಿಯೋಗಳನ್ನು ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಡಿಸಿಪಿ ಆರ್.ಸತ್ಯಸುಂದರಂ ಹೇಳಿದ್ದಾರೆ. ಅಶ್ಲೀಲ ಸಾಮಗ್ರಿಯಿದ್ದ ಆರೋಪಿಯ ಮೊಬೈಲ್ ಫೋನನ್ನು ವಶಪಡಿಸಿಕೊಂಡಿರುವ ಪೊಲೀಸರು, ಈ ಪ್ರಕರಣದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.