ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣ ಅಬ್ಬರಕ್ಕೆ ಜನಜೀವನ ತತ್ತರಿಸುತ್ತಿದ್ದು, ಜಿಲ್ಲೆಯ ಹಲೆವೆಡೆ ಮತ್ತೊಮ್ಮ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದ ನದಿ ತೊರೆಗಳು ತುಂಬಿ ಹರಿಯುತ್ತಿದೆ. ಕೊಡಗಿನ ಪ್ರಮುಖ ನದಿಗಳಾದ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತ್ರಿವೇಣಿ ಸಂಗಮ ಜಲಾವೃತವಾಗಿದೆ.
ಮಡಿಕೇರಿ ಕಸಬಾ ೬೯.೪೦, ನಾಪೋಕ್ಲು ೧೪೭.೨೦, ಸಂಪಾಜೆ ೫೩.೫೦, ಭಾಗಮಂಡಲ ೧೬೫.೪೦, ವಿರಾಜಪೇಟೆ ಕಸಬಾ ೧೧೦.೪೦, ಹುದಿಕೇರಿ ೮೮.೮೫, ಶ್ರೀಮಂಗಲ ೧೭೬, ಪೊನ್ನಂಪೇಟೆ ೯೨, ಅಮ್ಮತ್ತಿ ೫೦, ಬಾಳೆಲೆ ೬೮, ಸೋಮವಾರಪೇಟೆ ಕಸಬಾ ೮೨, ಶನಿವಾರಸಂತೆ ೧೧೫.೮೦, ಶಾಂತಳ್ಳಿ ೧೬೦, ಕೊಡ್ಲಿಪೇಟೆ ೭೫, ಕುಶಾಲನಗರ ೨೨, ಸುಂಟಿಕೊಪ್ಪ ೬೨ ಮಿ.ಮೀ.ಮಳೆಯಾಗಿದೆ.
ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಜಿಲ್ಲೆಯ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಟ್ಟಿ ಹೊಳೆ ಮುಕ್ಕೊಡ್ಲು ತಂತಿ ಪಾಲದ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬರೆ ಕುಸಿದಿತ್ತು. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ರವರು ಜೆ.ಸಿ.ಬಿ. ತರಿಸಿ ಸಾರ್ವಜನಿಕ ಅನುಕೂಲವಾಗುವಂತೆ ರಸ್ತೆ ಬಿಡಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, ಈಗಾಗಲೇ ಮಳೆ ಹೆಚ್ಚಾಗಿ ಕಾವೇರಿ ಹೊಳೆಯ ನೀರು ಹೆಚ್ಚಾಗಿ ಅಪಾಯದ ಸ್ಥಿತಿಯಲ್ಲಿದೆ. ಸಾರ್ವಜನಿಕರು ಎಚ್ಚರ ವಹಿಸಬೇಕಾಗಿ ಮನವಿ ಮಾಡಿದ ಅವರು, ಹಾರಂಗಿಯ ಒಳ ಹರಿವು ೨೦ಸಾವಿರ ಕ್ಯೂಸೆಕ್ಸ್ ಇದ್ದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲು ಶಾಸಕರು ಸೂಚಿಸಿದ್ದಾರೆ.
ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ರಸ್ತೆ ಬಿರುಕುಬಿಟ್ಟಿದೆ. ಈ ಹಿನ್ನೆಲೆ ವಿರಾಜಪೇಟೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗೆ ಇದೊಂದೆ ರಸ್ತೆ ಸಂಪರ್ಕ ಸೇತುವೆಯಾಗಿದೆ. ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡ ಪರಿಣಾಮ ೧೦ ಚಕ್ರದ ವಾಹನಗಳು ಕೂಡ ಇದೇ ಮಾರ್ಗದಲ್ಲಿ ಸಂಚರಿಸುತ್ತಿದೆ. ಪರಿಣಾಮ ಬಿರುಕು ಜಾಸ್ತಿಯಾಗುವ ಸಾಧ್ಯತೆಗಳಿವೆ. ಮಳೆ ಕೂಡ ಹೆಚ್ಚಾಗಿರುವುದರಿಂದ ವಾಹನ ಸಂಚಾರ ಸ್ಥಗಿತಗೊಳಿಸಬೇಕು. ಇಲ್ಲದಿದ್ದಲ್ಲಿ ದಕ್ಷಿಣ ಕನ್ನ ಮತ್ತು ಕೊಡಗು ಸಂಪರ್ಕ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.