ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷ, ಸತತ 4ನೇ ಬಾರಿ ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಬಾಯ್ಕಾಟ್ ಇಂಡಿಯಾ ಅಭಿಯಾನ ಆರಂಭವಾಗಿದೆ. ಭಾರತದಿಂದ ಎಲ್ಲಾ ರೀತಿಯ ವಸ್ತುಗಳ ಆಮದು ನಿಷೇಧಿಸಬೇಕು ಎಂದು ಭಾರತ ವಿರೋಧಿ ನಿಲುವು ಹೊಂದಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಿಎನ್ಪಿ ಸೇರಿದಂತೆ ವಿಪಕ್ಷಗಳು ಕಳೆದ ಜನವರಿಯಲ್ಲಿ ಆರಂಭಿಸಿದ್ದ ಅಭಿಯಾನ ಇದೀಗ ತೀವ್ರತೆ ಪಡೆದುಕೊಂಡಿದೆ.
ಶೇಖ್ ಹಸೀನಾ ಭಾರತ ಸ್ನೇಹಿ ನಿಲುವು ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಗೆಲುವಿಗೆ ಭಾರತ ಕೂಡಾ ನೆರವಾಗಿದೆ ಎಂಬುದು ವಿಪಕ್ಷಗಳ ಆರೋಪ. ಇದೇ ಕಾರಣಕ್ಕಾಗಿ ಕಳೆದ ಜನವರಿಯಲ್ಲಿ ನಡೆದ ಚುನಾವಣೆ ವೇಳೆಯೇ ವಿಪಕ್ಷಗಳು ಇಂಥದ್ದೊಂದು ಅಭಿಯಾನ ಆರಂಭಿಸಿದ್ದವು. ಈ ಅಭಿಯಾನ ಕಳೆದ ಕೆಲ ದಿನಗಳಿಂದ ಮತ್ತಷ್ಟು ತೀವ್ರತೆ ಪಡೆದುಕೊಂಡಿದ್ದು, ಭಾರತದ ಸೀರೆ ಆಮದು ನಿಷೇಧಿಸಬೇಕೆಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ.
ಈ ಅಭಿಯಾನಕ್ಕೆ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ಖಡಕ್ ತಿರುಗೇಟು ನೀಡಿದ್ದು, ಈ ಅಭಿಯಾನ ಆರಂಭಿಸಿರುವ ನಾಯಕರು ಜನರಲ್ಲಿ ಬಾಯ್ಕಾಟ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಈ ನಾಯಕರ ಪತ್ನಿಯರಲ್ಲಿರುವ ಭಾರತದ ಸೀರೆಯನ್ನು ಸುಟ್ಟು ಹಾಕುತ್ತೀರಾ? ನೀವು ಬಾಯ್ಕಾಟ್ ಇಂಡಿಯಾ ಮಾಡಿ ತೋರಿಸಿ ಎಂದು ಸವಾಲು ಹಾಕಿದ್ದಾರೆ.
‘ಬಾಯ್ಕಾಟ್ ಭಾರತ’ ಅಭಿಯಾನ ತೀವ್ರಗೊಳ್ಳುತ್ತಿರುವಂತೆ ಶೇಕ್ ಹಸಿನಾ ಪ್ರತಿಕ್ರಿಯಿಸಿದ್ದು, ಬಾಂಗ್ಲಾದೇಶದ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ನಾಯಕರು ಭಾರತದ ಉತ್ಪನ್ನಕ್ಕೆ ಬಹಿಷ್ಕಾರ ಅಭಿಯಾನ ತೀವ್ರಗೊಳಿಸುತ್ತಿದ್ದಾರೆ. ಆದರೆ ನ್ಯಾಷನಲಿಸ್ಟ್ ಪಾರ್ಟಿ ನಾಯಕರ ಪತ್ನಿಯರ ಬಳಿ ಎಷ್ಟು ಭಾರತದ ಸೀರೆಗಳಿವೆ. ಅವುಗಳನ್ನು ಸುಟ್ಟು ಹಾಕುತ್ತೀರಾ? ನಾಯಕರು ತಮ್ಮ ಪತ್ನಿಯರ ಬಳಿ ಇರುವ ಭಾರತೀಯ ಸೀರೆಗಳನ್ನು ತಂದು ಅವರ ಕಚೇರಿ ಮುಂದೆ ಸುಟ್ಟುಹಾಕಲಿ. ಹೀಗೆ ಮಾಡಿದರೆ ಅದು ನಿಜವಾದ ಬಾಯ್ಕಾಟ್ ಇಂಡಿಯಾ ಅಭಿಯಾನ ಎಂದು ಹೇಳಿದ್ದಾರೆ.