ಸಮಗ್ರ ನ್ಯೂಸ್ : ಲೋಕಕ್ಕೆ ಬೆಳಕಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು ೧೧೭ನೇ ಜನ್ಮದಿನವನ್ನು ನಗರದ ಎಂ.ಜಿ.ರಸ್ತೆಯ ಬಸವಣ್ಣ ಗುಡಿಯಲ್ಲಿ ಅಖಿಲ ಭಾರತ ವೀರೈಶವ ಮಹಾ ಸಭಾ, ಪಂಚಾಚಾರ್ಯ ಸೇವಾಸಮಿತಿ, ಗುಂಡಭಕ್ತ ಮಂಡಳಿ, ವೀರಶೈವ ಸಮಾಜದ ಮುಖಂಡರುಗಳು ಸೋಮ ವಾರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಚರಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಮೌಳಿ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿದ್ದ ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆ ದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಎಂದು ಹೇಳಿದರು.
ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವತತ್ವ ಭಿತ್ತಿ ಇತಿಹಾಸದ ಸುವರ್ಣಾಕ್ಷರದಲ್ಲಿ ದಾಖಲಿಸುಂ ವಂತಹ ಸಾಧನೆ ಮಾಡಿರುವ ಸಿದ್ಧಗಂಗಾ ಶ್ರೀಗಳು ಮನುಕುಲಕ್ಕೆ ಮಾದರಿ. ಇಡೀ ಜೀವತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟವರು. ಶ್ರೀಗಳು ಜಾತಿ, ಧರ್ಮಬೇಧ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿ ಅನ್ನ, ವಸತಿ, ಶಿಕ್ಷಣ ಕ್ಕೆ ಒತ್ತು ಕೊಟ್ಟು ಸ್ವಾಸ್ಥ್ಯ ಸಮಾಜಕ್ಕ್ಕೆ ಬುನಾದಿ ಹಾಕಿದವರು ಎಂದರು.
ಶಿವಕುಮಾರ ಸ್ವಾಮೀಜಿಯು ಹಸಿದು ಬಂದ ಅತಿಥಿಗಳಿಗೆ ದಾಸೋಹ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ನಡೆದಾಡುವ ದೇವರು, ಅಭಿನವ, ಬಸವಣ್ಣ ಎಂದೇ ಹೆಸರಾಗಿದ್ದವರು ೧೧೧ ವರ್ಷಗಳ ತುಂಬು ಜೀವನ ನಡೆಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಆರೋಗ್ಯ ವಸತಿ ಕಲ್ಪಿಸಿ ಸಮಾಜಕ್ಕೆ ಮಾದರಿಯಾದವರನ್ನು ರಾಜ್ಯ ಸರ್ಕಾರ ಶ್ರೀಗಳ ಜಯಂತಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ವೀರಶೈವ ಸಮಾಜದ ಮುಖಂಡ ಜಿ.ವೀರೇಶ್ ಮಾತನಾಡಿ ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಜನೆ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಕೆಲಸದಲ್ಲಿದ್ದು ಪ್ರತಿ ವರ್ಷವು ಶ್ರೀಗಳ ಜನ್ಮದಿನದ ಅಂಗ ವಾಗಿ ಮಠಕ್ಕಾಗಮಿಸಿ ಕೈಲಾದ ಸೇವೆ ಸಲ್ಲಿಸಿ ಜನ್ಮದಿನವನ್ನು ಕುಟುಂಬದ ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ ಎಂದರು. ಜಾತಿ, ಧರ್ಮ ಮೀರಿ ಮಕ್ಕಳಿಗೆ ವಿದ್ಯಾದಾನ ಮಾಡಿ ಸಮಾಜದ ಏಳಿಗೆಗೆ ದುಡಿದಿರುವ ಶ್ರೀಗಳಿಗೆ ಸರ್ಕಾರ ಶೀಘ್ರದಲ್ಲೇ ಭಾರತ ರತ್ನ ನೀಡಿ ಗೌರವಿಸಬೇಕು ಎಂದ ಅವರು ಇಂತಹ ಮಹಾನೀಯರು ಜನ್ಮವಿತ್ತ ನಾಡಿನಲ್ಲಿ ನಾವೆಲ್ಲರೂ ಜನ್ಮಸಿರುವುದಕ್ಕೆ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಪಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ವೀರಶೈವ ಸಮಾಜದ ಅಧ್ಯಕ್ಷ ಅಶೋಕ್, ಮುಖಂಡರುಗಳಾದ ಎಂ.ಬಿ. ಅಶೋಕ್‌ಕುಮಾರ್, ಬಿ.ಆರ್.ಜಯಪ್ರಕಾಶ್, ಕಾಂತರಾಜ್, ಎ.ಎಸ್.ಎಸ್.ಆರಾಧ್ಯ, ಲೋಕೇಶ್, ಉಮೇಶ್, ಗಂಗಾಧರಪ್ಪ ಮತ್ತಿತರರು ಹಾಜರಿದ್ದರು