ಸಮಗ್ರ ನ್ಯೂಸ್: ಭೂ ಲೋಕದ ಸ್ವರ್ಗ ಎಂದು ಹೆಸರಾಗಿರುವ ಕಾಶ್ಮೀರದಲ್ಲಿ ಕೆಲವು ವರ್ಷಗಳ ಹಿಂದೆ ಗುಂಡಿನ ಸದ್ದು ಮಾತ್ರ ಕೇಳಿಸುತ್ತಿದ್ದು, ಇದೀಗ ಈಗ ಅತಿಥಿಗಳ ಕಲರವ ಕೇಳಿಬರುತ್ತಿದೆ. ಕಣಿವೆ ರಾಜ್ಯಕ್ಕೆ ಈಗ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿದ್ದು, ಪ್ರವಾಸೋದ್ಯಮದ ಚಿತ್ರಣವೇ ಬದಲಾಗುತ್ತಿದೆ.
ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಲ್ಲಿ ಬರೋಬ್ಬರಿ 12,000 ಹೋಮ್ಸ್ಟೇಗಳು ಬುಕ್ಕಿಂಗ್ ಆಗಿವೆ ಎಂಬುದೇ ಇಲ್ಲಿಗೆ ಪ್ರವಾಸಿಗರು ಎಷ್ಟು ಆಕರ್ಷಿತರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. ಇದಲ್ಲದೆ ಇಲ್ಲಿನ ಸ್ಥಳೀಯರೂ ಪ್ರವಾಸಿಗರನ್ನು ಆಕರ್ಷಿಸಲು ತಮ್ಮ ವಸತಿ ಸ್ಥಳಗಳಲ್ಲಿಯೇ ಹೋಮ್ ಸ್ಟೇ ಆರಂಭಿಸುತ್ತಿದ್ದಾರೆ. ಕೇರಾನ್, ತಂಗಫಾರ್, ಬಂಗಸ್ ಕಣಿವೆ, ಗುರೇಜ್, ದಾವರ್, ಉರಿ ಮೊದಲಾದ ಗಡಿಪ್ರದೇಶಗಳಲ್ಲಿ ಇನ್ನಷ್ಟು ಹೋಮ್ಸ್ಟೇಗಳು ಆರಂಭವಾಗುತ್ತಿದೆ.
ಕಳೆದ ಎರಡು ವರ್ಷಗಳಿಂದ ಕಾಶ್ಮೀರದಲ್ಲಿ ಹೋಮ್ಸ್ಟೇಗಳಿಗೆ ಭೇಟಿ ನೀಡಿದ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಿಷನ್ ಯೂತ್ ಯೋಜನೆಯಡಿಯಲ್ಲಿ ಹೋಮ್ಸ್ಟೇಗಳನ್ನು ಸ್ಥಾಪಿಸಲು ಇಚ್ಛಿಸುವ ಯುವಕ, ಯುವತಿಯರಿಗೆ ಸರ್ಕಾರವೂ ಸಹಾಯಧನ ನೀಡುತ್ತಿದೆ. ಸ್ಥಳೀಯರೇ ಹೋಮ್ ಸ್ಟೇ ಪ್ರಾರಂಭಿಸುವುದರಿಂದ ಒಂದೆಡೆ ಪ್ರವಾಸಿಗರ ವಸತಿ ವೆಚ್ಚ ಅಗ್ಗವಾಗುವುದಲ್ಲದೇ ಸ್ಥಳೀಯರಿಗೂ ಆರ್ಥಿಕ ಸಹಾಯ ಸಿಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜಾ ಯಾಕೂಬ್ ಫಾರೂಕ್ ತಿಳಿಸಿದ್ದಾರೆ.