ಬೆಂಗಳೂರು: ಸಿಎಂ ಕುರ್ಚಿಯಿಂದ ಈ ಮಾಸಾಂತ್ಯಕ್ಕೆ ಕೆಳಗಿಳಿಯುವ ಬಗ್ಗೆ ಇದೇ ಮೊದಲ ಬಾರಿಗೆ ಸ್ವತಃ ಪ್ರತಿಕ್ರಿಯಿಸಿರುವ ಬಿಎಸ್ವೈ, ರಾಜ್ಯದಲ್ಲಿ ಮುಂದಿನ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದಿದ್ದಾರೆ. ಇದು ಪದತ್ಯಾಗಕ್ಕೆ ಯಡ್ಡಿ ಮಾನಸಿಕವಾಗಿ ತಯಾರಾಗಿರುವ ಸೂಚನೆ ನೀಡಿದಂತಾಗಿದೆ.
ಈ ಬಗ್ಗೆ ಇಂದು ಸುದ್ದಿಗರರೊಂದಿಗೆ ಮಾತನಾಡಿದ ಸಿಎಂ, 26 ರವರೆಗೆ ರಾಜ್ಯಕ್ಕಾಗಿ ಶ್ರಮಿಸುತ್ತಿದ್ದೇನೆ. ಆ ಬಳಿಕ ಪಕ್ಷದ ವರಿಷ್ಟರ ನಿರ್ಧಾರಕ್ಕೆ ತಲೆಬಾಗಿ ಅವರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಜುಲೈ 25ಕ್ಕೆ ಹೈಕಮಾಂಡ್ ನಿಂದ ಸೂಚನೆ ಬರುತ್ತದೆ, ಅದರಂತೆ ನಡೆದುಕೊಳ್ಳುತ್ತೇನೆ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಮುಂದಿನ ಎರಡು ವರ್ಷ ಪಕ್ಷಕ್ಕಾಗಿ ಸಾಕಷ್ಟು ದುಡಿದು ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.
75 ವರ್ಷದ ಬಳಿಕ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನವಿಲ್ಲ. 75 ದಾಟಿದವರಿಗೆ ಅಧಿಕಾರ ನೀಡದಿರುವುದು ಪಕ್ಷದ ನಿಯಮ. ಅದಾಗಿಯೂ ನನಗೆ 78 ವರ್ಷದ ವರೆಗೆ ಪಕ್ಷದ ವರಿಷ್ಟರು ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯಕ್ಕಾಗಿ ದುಡಿಯುವ ಅವಕಾಶ ನೀಡಿದ್ದರು. ಪಕ್ಷದ ನಿಲುವಿಗೆ ನಾನೆಂದಿಗೂ ಅಭಾರಿಯಾಗಿರುತ್ತೇನೆ ಎಂದು ಬಿಎಸ್ವೈ ಹೇಳಿದರು.