ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೇಂದ್ರವು ಕಡಿತಗೊಳಿಸದಿದ್ದರೂ ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ.
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಮತ್ತು ಅದರ ಮಿತ್ರರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿರುವುದು ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಕುಸಿಯುತ್ತಿರುವುದರಿಂದ ಇಂಧನ ಬೆಲೆಗಳು ಇನ್ನೂ ಕಡಿಮೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ತೈಲ ಬೆಲೆಯಲ್ಲಿ ಬುಧವಾರ ಇಳಿಕೆಯಾಗಿದೆ. ಮಂಗಳವಾರ ಶೇ. 1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಬ್ರೆಂಟ್ ಕಚ್ಚಾ ತೈಲ ಬುಧವಾರ ಶೇ 0.8 ರಷ್ಟು ಕುಸಿದು ಬ್ಯಾರೆಲ್‌ಗೆ ಸುಮಾರು 69 ಡಾಲರ್‌ಗೆ ತಲುಪಿದೆ.
ಉತ್ಪಾದನೆಯನ್ನು ಹೆಚ್ಚಿಸಲು ಒಪೆಕ್ + ದೇಶಗಳು ಒಪ್ಪಿದ ನಂತರ ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗುತ್ತಿದೆ. ಕೊರೊನಾ ವೈರಸ್‌ನ ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರ ಮತ್ತು ಪ್ರಪಂಚದಾದ್ಯಂತದ ಹಲವಾರು ದೇಶಗಳಲ್ಲಿನ ಹೊಸ ನಿರ್ಬಂಧಗಳಿಂದಾಗಿ ಇಂಧನ ಬೇಡಿಕೆಯ ದೃಷ್ಟಿಕೋನದ ಬಗ್ಗೆ ಹೆಚ್ಚುತ್ತಿರುವ ಕಳವಳದಿಂದಾಗಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ.’ ಎಂದು ಕೆಡಿಯಾ ಕಮಾಡಿಟೀಸ್‌ನ ಅಜಯ್ ಕುಮಾರ್ ಕೆಡಿಯಾ ಹೇಳಿದರು.
ಒಪೆಕ್ ಮತ್ತು ಅದರ ಮಿತ್ರ ರಾಷ್ಟ್ರಗಳು ಜಾಗತಿಕ ತೈಲ ಉತ್ಪಾದನೆಯನ್ನು ದಿನಕ್ಕೆ 4,00,000 ಬ್ಯಾರೆಲ್‌ಗೆ ಹೆಚ್ಚಿಸಲು ಒಪ್ಪಿಕೊಂಡಿವೆ. ಕೋವಿಡ್ -19 ಆರಂಭದಲ್ಲಿ ಉತ್ಪಾದನೆಯನ್ನು ಮಾಡಿದ್ದ ಎಲ್ಲ ಕಡಿತವನ್ನು ಪುನಃಸ್ಥಾಪಿಸಲು ಆ ದೇಶಗಳು ಬದ್ಧವಾಗಿವೆ.
ಹೊಸ ಕೋವಿಡ್ ಪ್ರಕರಣಗಳಿಂದಾಗಿ ಉತ್ಪಾದನೆ ಮತ್ತು ಕಡಿಮೆ ಬೇಡಿಕೆಯಿಂದಾಗಿ ಕಚ್ಚಾ ತೈಲದ ಬೆಲೆ ತನ್ನಷ್ಟಕ್ಕೆ ತಾನೆ ಕಡಿಮೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.