ಗುಜರಾತ್: ಸಾವಿನಂಚಿನಲ್ಲಿರುವ ಪತಿಯ ವೀರ್ಯ ದಿಂದ ನಾನು ಮಗುಹೊಂದಲು ಬಯಸುತ್ತೇನೆ ಎಂದ ಪತ್ನಿಯ ಮಾತನ್ನು ಒಪ್ಪದಿದ್ದಾಗ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆಕೆಯ ಪರವಾಗಿ ನ್ಯಾಯಧೀಶರು ತೀರ್ಪು ನೀಡಿದ ಘಟನೆ ರಾಜ್ಯದಲ್ಲಿ ನಡೆದಿದೆ.
ಗುಜರಾತ್ ಮೂಲದ ಈ ದಂಪತಿ ನಾಲ್ಕು ವರ್ಷಗಳ ಹಿಂದೆ ಕೆನಡದಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಅಲ್ಲೇ ವಾಸಿಸುತ್ತಿದ್ದರು. ಆದರೆ ಪತಿಯ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ನೋಡಿಕೊಳ್ಳಲು ಸ್ವದೇಶಕ್ಕೆ ಮರಳಿದ್ದರು. ಈ ದಂಪತಿ ಈ ವರೆಗೆ ಮಕ್ಕಳನ್ನು ಹೊಂದಿಲ್ಲ. ಈ ನಡುವೆ ಕಳೆದ ಮೇ ತಿಂಗಳಿನಲ್ಲಿ ಪತಿ ಕೋವಿಡ್ ಗೆ ತುತ್ತಾಗಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಕಳೆದೆರಡು ತಿಂಗಳಿಂದ ವೆಂಟಿಲೇಟರ್ ನಲ್ಲಿರುವ ಪತಿ ಇನ್ನೆರಡು ದಿನಗಳಲ್ಲಿ ಸಾವನ್ನಪ್ಪುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಪತ್ನಿಯು ಬಹಳ ನೊಂದಿದ್ದಾರೆ. ಬಳಿಕ ತಮ್ಮಿಬ್ಬರ ಪ್ರೀತಿಯ ಪ್ರತೀಕವಾಗಿ ಮಗುವನ್ನು ಹೊಂದುವ ದೃಷ್ಟಿಯಲ್ಲಿ ತನ್ನ ಪತಿಯ ವೀರ್ಯ ಸಂಗ್ರಹಿಸಿಡುವಂತೆ ವೈದ್ಯರಲ್ಲಿ ವಿನಂತಿಸಿಕೊಂಡಿದ್ದಾರೆ. ಆದರೆ ಇದಕ್ಕೆ ಆಸ್ಪತ್ರೆ ಒಪ್ಪಲಿಲ್ಲ.
ಪತಿ ಇನ್ನು 24 ಗಂಟೆ ಮಾತ್ರ ಬದುಕಿರ್ತಾರೆಂಬ ಸುದ್ದಿ ಕೇಳ್ತಿದ್ದಂತೆ ಸೋಮವಾರ ಪತ್ನಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ವಿಚಾರಣೆ ನಡೆಸಿದ ಕೋರ್ಟ್ 15 ನಿಮಿಷದಲ್ಲಿ ತೀರ್ಪು ನೀಡಿತ್ತು. ಸದ್ಯ ವೀರ್ಯ ಸಂಗ್ರಹಿಸಲು ಕೋರ್ಟ್ ಅನುಮತಿ ನೀಡಿದೆ. ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.