ಸುಳ್ಯ: ಅಂಗಡಿಯಲ್ಲಿ ಪಕ್ಕದ ಮನೆ ಅಜ್ಜಿ ಹೆಸರಿನಲ್ಲಿ ಸಾಲ ಮಾಡಿ ಮೊಬೈಲ್ ಖರೀದಿಸಿ ಕಂತು ಪಾವತಿಸದೆ ಯುವಕ ನಾಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ.
ನಗರದ ನಾವೂರು ನಿವಾಸಿ ಹ್ಯಾರಿಸ್ ಎಂಬ ಯುವಕ ಅಜ್ಜಿಯನ್ನು ಯಾಮಾರಿಸಿದವ. ಈತ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಕದೀಜ ಎಂಬ ಅಜ್ಜಿಯನ್ನು ನಂಬಿಸಿ ನಗರದ ಮೊಬೈಲ್ ಅಂಗಡಿ ಕರೆದೊಯ್ದಿದ್ದಾನೆ. ಅಲ್ಲಿ ಅಜ್ಜಿಯಿಂದ ಬ್ಯಾಂಕ್ ಅಕೌಂಟ್ ಬುಕ್, ಆಧಾರ್ ಕಾರ್ಡ್, ಫೋಟೋ ಇನ್ನಿತರ ದಾಖಲೆ ಪತ್ರಗಳನ್ನು ನೀಡಿ, ಅಜ್ಜಿಯನ್ನು ತನ್ನ ತಾಯಿಯೆಂದು ಮೊಬೈಲ್ ಅಂಗಡಿಯವರಿಗೆ ತಿಳಿಸಿ, 16 ಸಾವಿರ ಬೆಲೆಯ ಮೊಬೈಲ್ ಖರೀದಿಸಿದ್ದಾನೆ.
2020 ಫೆಬ್ರವರಿ 22ರಂದು ಮೊಬೈಲ್ ಖರೀದಿಸಲಾಗಿದ್ದು ಇತ್ತೀಚೆಗೆ ವೃದ್ದೆಯ ಮೊಬೈಲ್ಗೆ 18 ಸಾವಿರಕ್ಕೂ ಹೆಚ್ಚಿನ ಹಣ ಬಾಕಿ ಇರುವ ಬಗ್ಗೆ ಮೆಸೇಜ್ ಬಂದಿದೆ. ಇದನ್ನು ವೃದ್ಧೆ ತನ್ನ ಮಗಳಿಗೆ ತೋರಿಸಿದ್ದು, ಅವರು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ವಂಚನೆ ಬಯಲಾಗಿದೆ.
ಅದಾಗಲೇ ಒಂದು ವರ್ಷದ ಹಿಂದೆ ವಂಚಕ ಯುವಕ ಮನೆಯವರ ಜೊತೆ ನಾವೂರಿನಲ್ಲಿದ್ದ ಮನೆಬಿಟ್ಟು ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. ಇದೀಗ ಯುವಕನ ಮನೆಯವರನ್ನು ಸಂಪರ್ಕಿಸಲಾಗಿದೆ, ಆದರೆ ಮನೆಯವರು ಕೂಡ ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.