ಸಮಗ್ರ ನ್ಯೂಸ್: ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಇಂದು ಬೆಳಗಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ನಾಡಿನ ಹೆಸರಾಂತ ಸಾಹಿತಿಯಾಗಿದ್ದ ಕಾಪಸೆ ಅವರು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
ಧಾರವಾಡ ಸಪ್ತಾಪುರ ದುರ್ಗಾ ಕಾಲೋನಿಯ ನಿವಾಸಿಯಾಗಿದ್ದ ಇವರು, ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮದವರು. 1928ರ ಎಪ್ರಿಲ್ 2ರಂದು ಜನಿಸಿದ್ದರು. ಬೇಂದ್ರೆ, ಮಧುರ ಚೆನ್ನ ಸೇರಿದಂತೆ ಪ್ರಖ್ಯಾತ ಸಾಹಿತಿಗಳ ಒಡನಾಡಿಯಾಗಿದ್ದ ಕಾಪಸೆ, 1945ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಕಾಲಾಂತರದಲ್ಲಿ ಧಾರವಾಡಕ್ಕೆ ಬಂದು ನೆಲೆಸಿದ್ದ ಕಾಪಸೆ ಇಲ್ಲಿಂದ ತಮ್ಮ ಸಾಹಿತ್ಯ ಕಾಯಕ ಮುಂದುವರಿಸಿದ್ದರು.
ಇಂದು ಮಧ್ಯಾಹ್ನ 2ರವರೆಗೆ ಮೃತರ ಅಂತಿಮ ದರ್ಶನಕ್ಕೆ ದುರ್ಗಾ ಕಾಲೋನಿಯ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.