ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಸಮಯದಲ್ಲಿ ಬಳ್ಳಾರಿಯಲ್ಲಿ ಚಿನ್ನ, ಬೆಳ್ಳಿಯ ಉಡುಗೊರೆ ಕೊಟ್ಟು ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಬಳ್ಳಾರಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಕಸರತ್ತು ನಡೆಸುತ್ತಿದ್ದು, ಮೇಯರ್ ಆಕಾಂಕ್ಷಿಗಳು ಭರ್ಜರಿ ಉಡುಗೊರೆ ನೀಡಿದ್ದಾರೆ.
ಮಾರ್ಚ್ 28ರಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ. ಬಹುಮತ ಇದ್ದರೂ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಇದೀಗ ಗಿಫ್ಟ್ ಕೊಟ್ಟು ಜನರನ್ನು ಸೆಳೆಯುತ್ತಿದ್ದಾರೆ. ಮುಲ್ಲಂಗಿ ನಂದೀಶ್, ಗಾದೆಪ್ಪ, ಪೇರಂ ವಿವೇಕ್ ಮತ್ತು ಪಕ್ಷೇತರ ಸದಸ್ಯ ಪ್ರಭಂಜನ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಮುಲ್ಲಂಗಿ ನಂದೀಶ್ ಮತ್ತು ಪಕ್ಷೇತರ ಸದಸ್ಯ ಪ್ರಭಂಜನ್ ಮಧ್ಯೆ ತೀವ್ರ ಪೈಪೋಟಿಗಿಳಿದು ಗಿಫ್ಟ್ ನೀಡುತ್ತಿದ್ದಾರೆ.
ಮುಲ್ಲಂಗಿ ನಂದೀಶ್ ಬೆಳ್ಳಿ ತಟ್ಟೆ ಮತ್ತು ಕಾಂಗ್ರೆಸ್ ಸಿಂಬಲ್ ಇರುವ ಬಂಗಾರದ ಚಿಕ್ಕ ಆಭರಣ ನೀಡಿದರೆ, ಪಕ್ಷೇತರ ಸದಸ್ಯ ಪ್ರಭಂಜನ್ ರೇಷ್ಮೆ ಪಂಚೆ ಮತ್ತು ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇತರೆ ಇಬ್ಬರು ಡ್ರೈಪ್ರೂಟ್ಸ್ ಬಾಕ್ಸ್ ನೀಡಿದ್ದಾರೆ. ಜೊತೆಗೆ ಸದಸ್ಯರ ಮನೆ ಮನೆಗೆ ಹೋಗಿ ಸನ್ಮಾನ ಮಾಡುತ್ತಿದ್ದಾರೆ. ಒಟ್ಟು 39 ಸದ್ಯರ ಪೈಕಿ 21 ಕಾಂಗ್ರೆಸ್, 5 ಪಕ್ಷೇತರರು ಮತ್ತು 13 ಬಿಜೆಪಿ ಸದಸ್ಯರಿದ್ದಾರೆ. ಇದರಲ್ಲಿ ಕೆಲವರು ಬಳ್ಳಾರಿ ಮಗರ ಶಾಸಕರ ಬೆಂಬಲಿಗರಾದರೆ, ಕೆಲವರು ಸಚಿವ ನಾಗೇಂದ್ರ ಬೆಂಬಲಿಗರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಸಹ ಸಚಿವ ನಾಗೇಂದ್ರ ಹಾಗೂ ನಗರ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವಣ ತೀವ್ರ ಪೈಪೋಟಿ ಏರ್ಪಟ್ಟಿತು. ಈಗಲೂ ಕೂಡ ಇಬ್ಬರ ಬೆಂಬಲಿಗರ ನಡುವೆ ಪೈಪೋಟಿ ಪಾಲಿಕೆ ಚುನಾವಣೆ ಸಾಕ್ಷಿಯಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.