ಮಂಗಳೂರು: ಹೌದು, ಕಳೆದ ವಾರ ಸುಳ್ಯದ ಜಾಲ್ಸೂರು ಗ್ರಾಮದ ಮರಸಂಕದ ವೃದ್ದೆಯೊಬ್ಬರನ್ನು ತುಂಬಿದ ಹೊಳೆಯಲ್ಲಿ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದ ಎಲ್ಲಾ ಮಾಧ್ಯಮಗಳು ಇದನ್ನು ಸುದ್ದಿ ಮಾಡಿದ್ದು, ಕ್ಷೇತ್ರದ ಶಾಸಕರೂ, ಸದ್ಯ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರರನ್ನು ತರಾಟೆಗೆ ತೆಗೆದುಕೊಂಡಿದ್ದವು. ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕಿದ್ದರು. ಆದರೆ ಈ ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಈ ಭಾಗದ ರೋಗಿಯೊಬ್ಬರು ಬಿದ್ದಾಗ ಚಯರ್ ಮೂಲಕ ಎತ್ತಿಕೊಂಡು ಹೋದ ಘಟನೆ ನಡೆದಿತ್ತು. ಈ ಘಟನೆ ಶಾಸಕರಿಗೂ, ಅಲ್ಲಿಯ ಸ್ಥಳೀಯ ಜನಪ್ರತಿನಿಧಿಗಳಿಗೂ ಗೊತ್ತಿತ್ತು. ಆದರೂ ಇದುವರೆಗೂ ಯಾಕೆ ಈ ಜನನಾಯಕರು ಸುಮ್ಮನಿದ್ದಾರೆ ಎಂಬುದೇ ಯಕ್ಷಪ್ರಶ್ನೆ.
ನಾಲ್ಕು ವರ್ಷಗಳ ಹಿಂದೆ ಜಾಲ್ಸೂರು ಗ್ರಾಮದ ಮರಸಂಕ ಬಳಿಯ ಶೇಷನಡ್ಕ ಎಂಬಲ್ಲಿ ವ್ಯಕ್ತಿಯೋರ್ವರು ಬಿದ್ದು ಏಟಾದಾಗ ಆಸ್ಪತ್ರೆಗೆ ಸೇರಿಸಲು ರಸ್ತೆಯಿಲ್ಲದೆ ಚಯರ್ ಮೂಲಕ ಹೊತ್ತೊಯ್ದಿರುವ ಘಟನೆಯನ್ನು ಅಲ್ಲಿನ ನಿವಾಸಿಯೋರ್ವರು ‘ಸಮಗ್ರ ಸಮಾಚಾರ’ ಪ್ರತಿನಿಧಿಗೆ ತಿಳಿಸಿದ್ದಾರೆ. ಆ ಸಮಯದಲ್ಲಿ ಆ ವ್ಯಕ್ತಿಯ ಕುಟುಂಬಿಕರು ಗ್ರಾ.ಪಂ ಗೆ ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸುವುದಾಗಿಯೂ ಹೇಳಿದ್ದರು. ಆದರೆ ಆಗಿನ ಜನಪ್ರತಿನಿಧಿಗಳು ಭರವಸೆ ನೀಡಿ ಪತ್ರಿಕೆಗೆ ತಿಳಿಸುವುದು ಬೇಡ, ಆದಷ್ಟು ಬೇಗ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ಶಾಸಕರಿಗೂ ಈ ಅಹವಾಲು ಸಲ್ಲಿಕೆಯಾಗಿದ್ದು, ಸೇತುವೆ ನಿರ್ಮಾಣದ ಆಶ್ವಾಸನೆ ನೀಡಿದ್ದರು. ಆದರೆ ಸೇತುವೆ ರಚನೆಗೆ ತಡೆಗೋಡೆ ನಿರ್ಮಾಣವಾಯಿತೇ ಹೊರತು, ಕಾಮಗಾರಿ ಮುಂದುವರಿಯಲಿಲ್ಲ. ಈ ಭಾಗದ ಜನರ ಮತಗಳು ಕಡಿಮೆ ಇರುವುದೇ ಇಲ್ಲಿ ಸೇತುವೆ ನಿರ್ಮಿಸದಿರಲು ಕಾರಣವಾಗಿರಬಹುದೆಂಬ ಸಂಶಯ ಮೂಡುತ್ತಿದೆ.
ಇದೀಗ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಶಾಸಕರ ಪರ ಕೆಲವರು ಬ್ಯಾಟಿಂಗ್ ಗೆ ತೊಡಗಿದ್ದು, ಕುಂಟುನೆಪ ಹೇಳುತ್ತಿದ್ದಾರೆ. ಸುಸಜ್ಜಿತ ಸೇತುವೆ ಹೊರತು ಸಣ್ಣದಾದ ಕಾಲುಸಂಕವನ್ನಾದರೂ ನಿರ್ಮಿಸಿ ಜನರಿಗೆ ನೆರವಾಗಲು ನಮ್ಮ ಸರ್ಕಾರದಲ್ಲಿ ಅನುದಾನ ಇಲ್ಲ. ಕಳೆದ 30 ವರ್ಷಗಳಿಂದ ಶಾಸಕರಾಗಿರುವವರಿಗೆ ನಾಲ್ಕು ವರ್ಷಗಳ ಹಿಂದಿನ ಅಹವಾಲು ಮರೆತೇ ಹೋಗಿರಬೇಕು ಅನ್ನುತ್ತಾರೆ ಸ್ಥಳೀಯರು. ಜನಪತ್ರಿನಿಧಿಗಳಿಗೆ ನೆನಪಿರಲಿ ಚಿಕ್ಕ ಪುಟ್ಟ ಕೆಲಸಗಳೇ ಜನರ ಮನಸ್ಸಲ್ಲಿ ಉಳಿಯುತ್ತವೆಯೇ ಹೊರತು ಭಾರತ್ ಮಾಲಾ, ಸಾಗರ ಮಾಲಾ ಯೋಜನೆಗಳಲ್ಲ. ಸ್ಥಳೀಯರಿಗೆ ನೆರವಾಗದೇ ರಾಷ್ಟ್ರೀಯ ಅನುದಾನಗಳಿಂದ ನಿರ್ಮಿಸಲಾದ ಸೇತುವೆ, ಮೂಲಸೌಕರ್ಯಗಳನ್ನು ನಮ್ಮದೆಂದು ಬೆನ್ನುತಟ್ಟಿಕೊಂಡರೆ ಕಾಲ ಉತ್ತರ ಕೊಡಲಾರದೇ?.