ಸಮಗ್ರ ನ್ಯೂಸ್: ದೇಶದೆಲ್ಲೆಡೆ ಚುನಾವಣಾ ಬಿಸಿ ಏರುತ್ತಿರುವ ಹೊತ್ತಿನಲ್ಲಿ, ಇನ್ನೊಂದೆಡೆ ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಕ್ಷಣಗಣನೆ ಶುರುವಾಗಿದೆ. ಚುನಾವಣೆ ಹೊರತಾಗಿಯೂ ಭಾರತದಲ್ಲೇ ಐಪಿಎಲ್ ಆಯೋಜಿಸುವುದಾಗಿ ಬಿಸಿಸಿಐ ತಿಳಿಸಿದೆ, ಈಗಾಗಲೇ 15 ದಿನಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಿದ್ದು, ಈ ಅವಧಿಯಲ್ಲಿ 21 ಪಂದ್ಯಗಳು ಆಯೋಜನೆಗೊಳ್ಳಲಿದೆ. ಉಳಿದ ಪಂದ್ಯಗಳ ವೇಳಾಪಟ್ಟಿ ಶೀಘ್ರ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಆಯೋಜಿಸಿದೆ. ಸಂಜೆ 6.30ಕ್ಕೆ ಸಮಾರಂಭ ಆರಂಭವಾಗಲಿದ್ದು, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಖ್ಯಾತ ಗಾಯಕ ಸೋನು ನಿಗಂ ಸೇರಿದಂತೆ ಪ್ರಮುಖರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 3 ಬಾರಿ ರನ್ನರ್-ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡಲಿವೆ. ಪ್ರಮುಖವಾಗಿ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ನಾಯಕತ್ವ ತ್ಯಜಿಸಿರುವ ಎಂ.ಎಸ್.ಧೋನಿಯ ವಾಪಸ್ಸಾತಿಗೆ ಎಲ್ಲರೂ ಕಾಯುತ್ತಿದ್ದಾರೆ. ಕಳೆದ ವರ್ಷ ಐಪಿಎಲ್ ಬಳಿಕ ಧೋನಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ವಿರಾಟ್ ಕೊಹ್ಲಿ ಹೆಚ್ಚೂ ಕಡಿಮೆ 3 ತಿಂಗಳ ಬಳಿಕ ಮೈದಾನಕ್ಕಿಳಿಯಲಿದ್ದಾರೆ.
ಕಾರು ಅಪಘಾತಕ್ಕೆ ತುತ್ತಾಗಿ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ಈ ಐಪಿಎಲ್‍ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಮರಳಲಿದ್ದು, ದೆಹಲಿ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಹಳೆ ತಂಡ ಮುಂಬೈನ ನಾಯಕತ್ವ ವಹಿಸಲಿದ್ದು, ತಂಡಕ್ಕಿರುವ ಖ್ಯಾತಿಯನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆಯಿದೆ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ನಡುವೆ ಗಾಯಗೊಂಡಿದ್ದ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಕೂಡಾ ಐಪಿಎಲ್ ಮೂಲಕ ಕಮ್‍ಬ್ಯಾಕ್‍ಗೆ ಸಜ್ಜಾಗುತ್ತಿದ್ದಾರೆ.
ಹರಾಜಿನಲ್ಲಿ ಬರೋಬ್ಬರಿ 20.5 ಕೋಟಿಗೆ ಹರಾಜಾಗಿದ್ದ ಪ್ಯಾಟ್ ಕಮಿನ್ಸ್ ಮತ್ತು ಯುವ ತಾರೆ ಶುಭ್‍ಮನ್ ಗಿಲ್‍ಗೆ ಮೊದಲ ಬಾರಿ ಐಪಿಎಲ್ ನಾಯಕತ್ವ ವಹಿಸಲಿದ್ದಾರೆ. ಕಳೆದ ವರ್ಷದ ಟೂರ್ನಿಗೆ ಗೈರಾಗಿದ್ದ ಶ್ರೇಯಸ್ ಅಯ್ಯರ್ ಕೋಲ್ಕತಾ ತಂಡವನ್ನು ಮುನ್ನಡೆಸಲಿದ್ದಾರೆ.