ಸಮಗ್ರ ನ್ಯೂಸ್ : ಕಳೆದ ಹಲವಾರು ತಿಂಗಳಿಂದ ನೆಲ್ಲಿಕಟ್ಟೆ ಪರಿಸರದ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಚಿಲ್ಲರೆ ಕಳವು, ಸೊತ್ತುಗಳಿಗೆ ಹಾನಿ ಮಾಡುವ ಪ್ರಕರಣ ಸೇರಿ ಸದಾ ಒಂದಲ್ಲೊಂದು ಅವಾಂತರ ನಡೆಯುತ್ತಿದ್ದು, ಇದೀಗ ಅಂಗನವಾಡಿ ಕೇಂದ್ರದ ಬೀಗ ಮುರಿದು ಒಳನುಗ್ಗಿದ ಕಿಡಿಗೇಡಿಗಳು ಪುಟಾಣಿಗಳಿಗೆಂದು ಇಡಲಾಗಿದ್ದ ಕೋಳಿ ಮೊಟ್ಟೆಗಳನ್ನು ಆಮ್ಲೇಟ್ ಮಾಡಿ ತಿಂದು ತೆರಳಿರುವ ಘಟನೆ ಮಾ.18ರಂದು ಬೆಳಕಿಗೆ ಬಂದಿದೆ.
ನೆಲ್ಲಿಕಟ್ಟೆಯ ಶ್ರೀ ರಾಮಕೃಷ್ಣ ಸಮಾಜ ಸೇವಾ ಸಂಸ್ಥೆಯ ಬಳಿಯ ಅಂಗನವಾಡಿ ಕೇಂದ್ರಕ್ಕೆ ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಬಂದಾಗ ಕೇಂದ್ರದ ಬಾಗಿಲ ಬೀಗ ಒಡೆದಿತ್ತು. ಒಳಗೆ ನೋಡಿದಾಗ ಅಡುಗೆ ಕೋಣೆಯಲ್ಲಿ ಪುಟಾಣಿಗಳಿಗೆಂದು ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದು, ಪಕ್ಕದಲ್ಲಿರುವ ಗ್ಯಾಸ್ ಸ್ಟವ್ ನ ಬಾನಲೆಯಲ್ಲಿ ಅಮ್ಮೆಟ್ ತುಂಡು ಇರುವುದು ಕಂಡುಬಂದಿದೆ.
ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಅಂಗನವಾಡಿಗೆ ನುಗ್ಗಿ ಅಮ್ಮೆಟ್ ಮಾಡಿ ತಿಂದು ಹೋಗಿದ್ದಾರೆ. ಘಟನೆ ಕುರಿತು ಪೊಲೀಸರು ಬಂದು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಾರದ ಹಿಂದೆಯಷ್ಟೆ ಪಕ್ಕದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿಡಿಗೇಡಿಗಳು ಸೊತ್ತುಗಳನ್ನು ನಾಶ ಮಾಡಿ ಗಲೀಜು ಮಾಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.