ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ಪರೀಕ್ಷೆಗಳು ನಾಳೆಯಿಂದ ಆರಂಭವಾಗಲಿದ್ದು, ಜಿಟಿಜಿಟಿ ಮಳೆಯ ನಡುವೆಯೇ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದೆ. ಕೊರೊನ ಆತಂಕದ ನಡುವೆಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ.
ನಾಳೆ(ಜು.19) ಗಣಿತ, ವಿಜ್ಞಾನ, ಸಮಾಜ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರಗೆ ಸಮಯವಿರುತ್ತದೆ.
ಈ ಬಾರಿಯ ಎಸ್‌ಎಸ್‌ಎಲ್ ಸಿ ಪರೀಕ್ಷೆಗೆ ಒಟ್ಟು 8,76,581 ವಿದ್ಯಾರ್ಥಿಗಳ ನೋಂದಣಿಯಾಗಿದ್ದು, ಇದರಲ್ಲಿ 4,72,643 ಬಾಲಕರುಉ ಮತ್ತು 40,49,38 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೆಮ್ಮು, ನೆಗಡಿ, ಜ್ವರ ಇರುವ ಮಕ್ಕಳಿಗೆ ವಿಶೇಷ ಕೊಠಡಿಯಲ್ಲಿ ಕೂರಿಸಲಾಗುವುದು.
ಪರೀಕ್ಷೆಗೆ 14,927 ಶಾಲೆಗಳನ್ನು ನೊಂದಾಯಿಸಲಾಗಿದೆ. 4,884 ರಷ್ಟು ಪರೀಕ್ಷಾ ಕೇಂದ್ರಗಳಿವೆ. ರಾಜ್ಯಾದ್ಯಂತ 73,066 ಪರೀಕ್ಷಾ ಕೊಠಡಿಗಳಿವೆ. 4,884 ಮುಖ್ಯ ಅಧಿಕ್ಷಕರು, 4,884 ಪ್ರಶ್ನೆ ಪತ್ರಿಕೆ ಅಭಿರಕ್ಷಕರು, 80,389 ಕೊಠಡಿ ಮೇಲ್ವಿಚಾರಕರು, 4,884 ಸ್ಥಾನಿಕ ಜಾಗೃತ ದಳದವರನ್ನು ನೇಮಕ ಮಾಡಲಾಗಿದೆ.
ಸಾರಿಗೆ ನಿಗಮಗಳೂ ಮಕ್ಕಳಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶಪತ್ರ ತೋರಿಸಿ ಉಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಕೆಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಅನುಮತಿ ನೀಡಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಾರದಂತ ಶಿವಯೋಗಿ ಸಿ ಕಳಸದ ಸುತ್ತೋಲೆ ಹೊರಡಿಸಿದ್ದು, 2020-21ನೇ ಸಾಲಿನ ಕರ್ನಾಟಕದ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಗಳನ್ನು ಸರ್ಕಾರ ಆದೇಶದಂತೆ ದಿನಾಂಕ 19-07-2021 ಮತ್ತು 22-07-2021ರಂದು ನಡೆಸಲು ತೀರ್ಮಾನಿಸಿದ್ದು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ಸೂಚಿಸಿದೆ.
ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಜುಲೈ 19 ಮತ್ತು 22 ರಂದು ಕೇವಲ ಎರಡು ದಿನ ಮಾತ್ರ ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಎಸ್‌ಎಸ್‌ಎಲ್ ಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರದ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ. ಸಂಬಂಧಿಸಿದ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ಜಿಲ್ಲಾ ಉಪ ನಿರ್ದೇಶಕರವರನ್ನು ಕೆಳಕಂಡ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಪರಿಹಾರ ಪಡೆಯಲು ಮಂಡಳಿ ತಿಳಿಸಿದೆ.
ಸರ್ಕಾರಿ ಸೂಚನೆಯಂತೆ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮವಹಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಬರೆಯುವಂತೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.