ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಕ್ಷಣಗಣನೆ ಪ್ರಾರಂಭವಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಜುಲೈ 26ಕ್ಕೆ ಯಡಿಯೂರಪ್ಪನವರು ಸರ್ಕಾರ ರಚಿಸಿ 2 ವರ್ಷ ಪೂರೈಸಲಿದ್ದು, ಮುಂದಿನ ಆಗಸ್ಟ್ ಮೊದಲ ವಾರದಲ್ಲಿ ಪದತ್ಯಾಗಕ್ಕೆ ವೇದಿಕೆ ಸಿದ್ದವಾಗಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
ರಾಘವೇಂದ್ರ-ವಿಜಯೇಂದ್ರ ಜೊತೆ ನಿನ್ನೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಖುಷಿಯಾಗೇ ಇದ್ದರು. ಇಂದು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಬೆಂಗಳೂರಿಗೆ ಹಿಂದಿರುಗಿದ್ದಾರೆ.
ಇದರ ಬೆನ್ನಲ್ಲೇ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬರುವಂತೆ ಬಿಜೆಪಿ ಹಿರಿಯ ನಾಯಕರು ಬಿಎಸ್‍ವೈಗೆ ಹೇಳಿ ಕಳಿಸಿದ್ದು, ಈ ಬೆಳವಣಿಗೆಯೇ ಸಿಎಂ ಬದಲಾವಣೆಯ ಸೂಚನೆ ಎನ್ನಲಾಗಿದೆ. ಆಗಸ್ಟ್ ಮೊದಲ ವಾರದಲ್ಲೇ ಮಹತ್ವದ ಬೆಳವಣಿಗಳು ನಡೆಯುವ ಸೂಚನೆಯಿದ್ದರೂ ಮುಖ್ಯಮಂತ್ರಿಗಳು ಮಾತ್ರ ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸಲ್ಲ. ರಾಜೀನಾಮೆ ಕೊಟ್ಟಿದ್ದರೆ ಮುಚ್ಚಿಡುವ ಪ್ರಶ್ನೆ ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ ಬಾರಿಯೂ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರ ತರುವ ಜವಾಬ್ದಾರಿ ನನ್ನದು, ಪ್ರಧಾನಿಗಳು ಕೂಡ ನಿನ್ನೆ ಇದನ್ನೇ ಹೇಳಿದ್ದಾರೆ ಅಂತ ಯಡಿಯೂರಪ್ಪ ಹೇಳಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ಮತ್ತೆ ದೆಹಲಿಗೆ ಬರುತ್ತೇನೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹೀಗಾಗಿ ಆಗಸ್ಟ್ ನಲ್ಲಿ ಬಿಜೆಪಿ ಕ್ರಾಂತಿ ಫಿಕ್ಸ್ ಆಗಿದೆ. ಇದರ ಜೊತೆಗೆ, ನಾಯಕತ್ವ ಬದಲಾವಣೆ ಆದ್ರೆ ಪ್ರಭಾವಿ ಸಚಿವರಿಗೆ ಸಂಪುಟದಿಂದ ಕೊಕ್ ಸಾಧ್ಯತೆ ಇದೆ. ಮೋದಿ ಸಂಪುಟ ಪುನಾರಚನೆ ರೀತಿಯಲ್ಲಿ ಯುವಕರಿಗೆ ಆದ್ಯತೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಕ್ಷ ನನಗೆ ಎಲ್ಲ ಕೊಟ್ಟಿದೆ, ಪಕ್ಷದ ಆಜ್ಞೆ ಮೀರಲ್ಲ. ನಾಯಕತ್ವ ವಿಚಾರದಲ್ಲಿ ನೀವು ಹೇಳಿದಂತೆ ಕೇಳುವೆ. ಬದಲಾವಣೆ ಮಾಡೋದಾದರೆ ಆಗಸ್ಟ್ 8ರ ನಂತರ ಮಾಡಿ, ಕನಿಷ್ಠ 10 ದಿನದ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ.
ರಾಜ್ಯಕ್ಕೆ ಪರ್ಯಾಯ ನಾಯಕತ್ವ ಅವಶ್ಯಕತೆ ಇದ್ದು, ಪ್ರಕ್ರಿಯೆ ಆರಂಭಿಸಿದ್ದೇವೆ. ನೀವು ಸರ್ವ ಸಮ್ಮತ ನಾಯಕ, ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. 2 ವರ್ಷದ ಸಂಭ್ರಮ ಪೂರೈಸಿ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬನ್ನಿ. ಆಗಸ್ಟ್ ಮೊದಲ ವಾರದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗಿದೆ.
24 ಗಂಟೆಗಳಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಮತ್ತು ಅಮಿತ್ ಶಾ ಅವರನ್ನು ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿಗೆ ಹೊರಟಿದ್ದ ಯಡಿಯೂರಪ್ಪರಿಗೆ ಅಮಿತ್ ಶಾ ಕೂಡಾ ಕರೆ ಮಾಡಿ ನಿವಾಸಕ್ಕೆ ಕರೆಸಿಕೊಂಡು ಇದೇ ವಿಚಾರದಲ್ಲಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ರಾಜ್ಯ ರಾಜಕಾರಣದಲ್ಲೆ ಹೊಸ ಕ್ರಾಂತಿಯ ಉದಯಕ್ಕೆ ನಾಂದಿಯಾಗುತ್ತಾ? ಕಾದು ನೋಡಬೇಕಿದೆ.