ಸಮಗ್ರ ನ್ಯೂಸ್: ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲೆ ಕಾಂಚಾಣದ ಸದ್ದು ಕೇಳಿಬರುತ್ತಿದೆ. ದೇಶದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಹಣ, ಹೆಂಡ ಮತ್ತು ವಸ್ತುಗಳ ಆಮಿಷ ಒಡ್ಡಿ ಮತದಾರರನ್ನು ಸೆಳೆಯುವುದಕ್ಕೆ ಬ್ರೇಕ್ ಬೀಳುತ್ತದೆ. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಅಲರ್ಟ್ ಆಗಿದ್ದು, ಅಕ್ರಮವಾಗಿ ಸಾಗಿಸುವ ಹಣದ ಮೇಲೆ ಕಣ್ಣಿಟ್ಟಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ಮತ್ತು ನೆಲಮಂಗಲದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಂತಿನಗರ ಚೆಕ್ ಪೊಸ್ಟ್ ನಲ್ಲಿ ನಿನ್ನೆ ರಾತ್ರಿ ಕಾರಿನಲ್ಲಿ ಸಾಗಿಸುತ್ತಿದ್ದ 13 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಲಕ್ಷ ರೂಪಾಯಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಜಾಸ್ ಟೋಲ್ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಕಾರಿನಲ್ಲಿದ್ದ ತಮಿಳುನಾಡಿನ ಉದ್ಯಮಿ ರಘುಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಘುಪತಿ ಬೆಂಗಳೂರಿನಿಂದ ತುಮಕೂರು ಮಾರ್ಗದಲ್ಲಿ ತೆರಳುತ್ತಿದ್ದರು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.