ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿಯಲ್ಲಿ ನಡೆಯುತ್ತಿದ್ದ ಗೊಂದಲಗಳಿಗೆ ಇಂದು ತೆರೆ ಬಿದ್ದಿದ್ದು, ಕೊನೆಗೂ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನಗೊಂಡಿದೆ. ಹಿಂದೂ ಪರ ಹೋರಾಟಗಾರ, ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ದಕ್ಷಿಣಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಪ್ರಮುಖರೊಂದಿಗೆ ಬೇಷರತ್ತಾಗಿ ಬಿಜೆಪಿ ಸೇರಿಕೊಂಡರು. ಈ ಮೂಲಕ ಕಳೆದ ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ಅಂಕದ ಪರದೆ ಬಿದ್ದಿದೆ.
ಕೆಲವು ದಿನಗಳ ಹಿಂದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅರುಣ್ ಪುತ್ತಿಲ ಭೇಟಿಯಾಗಿದ್ದರು. ಯಾವುದೇ ಬೇಡಿಕೆಯನ್ನು ಇಡದೇ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ವಿಜಯೇಂದ್ರ ಸೂಚಿಸಿದ್ದರು. ಇದಕ್ಕೆ ಪುತ್ತಿಲ ಪರಿವಾರ ಸಮ್ಮತಿ ಸೂಚಿಸಿತ್ತು. ಇದೀಗ ಎಲ್ಲವೂ ಸುಖಾಂತ್ಯಗೊಂಡಿದ್ದು ಪುತ್ತಿಲ ಪರಿವಾರವು ಮೋದಿ ಪರಿವಾರದ ಜೊತೆ ವಿಲೀನಗೊಂಡಿದೆ. ಇದರೊಂದಿಗೆ ಕಳೆದ ವಿಧಾನಸಭಾ ಚುನಾವಣೆಯಿಂದ ಆರಂಭಗೊಂಡಿದ್ದ ಬಿಜೆಪಿ – ಪುತ್ತಿಲ ಪರಿವಾರದ ನಡುವಿನ ಸಂಘರ್ಷ ತಾರ್ಕಿಕ ಅಂತ್ಯಕಂಡಿದೆ. ಪುತ್ತಿಲ ಪರಿವಾರವು ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿಗೆ ದಕ್ಷಿಣ ಕನ್ನಡದಲ್ಲಿ ಆನೆಬಲ ಬಂದಂತಾಗಿದೆ. ಪುತ್ತಿಲರನ್ನು ದಕ್ಷಿಣ ಕನ್ನಡ ಮಾತ್ರವಲ್ಲದೇ, ಉಡುಪಿ ಲೋಕಸಭಾ ವ್ಯಾಪ್ತಿಯಲ್ಲೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ.