ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಸೀಟು ಹಂಚಿಕೆ ಫೈನಲ್ ಹಂತ ತಲುಪಿದ್ದು, ಜೆಡಿಎಸ್‍ಗೆ ಮೂರು ಲೋಕಸಭಾ ಕ್ಷೇತ್ರಗಳು ದೊರಕಿವೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಬಹಿರಂಗಪಡಿಸಿದ್ದು, ಜೆಡಿಎಸ್ ಪಾಲಿಗೆ ಹಾಸನ, ಮಂಡ್ಯ, ಕೋಲಾರ ಕ್ಷೇತ್ರ ಸಿಕ್ಕಿದ್ದು, ಹಾಸನ ಕ್ಷೇತ್ರದಿಂದ ಜೆಡಿಎಸ್ ಪಾಲು ಆಗಿದ್ದು, ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ. ಈ ಮೂಲಕ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆಯನ್ನು ಖಚಿತಪಡಿಸಿದರು.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಪಕ್ಷ ಮುಗಿಸಲು ಅಲ್ಲ. ಪಾತಾಳಕ್ಕೆ ಬಿದ್ದಿದ್ದೇವೆ ಮೇಲೆ ಎದ್ದೇಳಬೇಕಲ್ಲ. ಇನ್ನು ನಾನು ಅಷ್ಟಬೇಗ ಸಾಯಲ್ಲ ನಿಮ್ಮ ಜೊತೆ ಇರುತ್ತೇನೆ. ಭಗವಂತ ನನಗೆ ಅಯಸ್ಸು ಕೊಡುತ್ತಾನೆ. ಜೆಡಿಎಸ್ ಪಕ್ಷ ಉಳಿಸಿ ಎಂದು ಕುಮಾರಸ್ವಾಮಿ ಭಾವುಕರಾದರು.
ಜೆಡಿಎಸ್ ಕನಿಷ್ಠ ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್ ಅಳೆದುತೂಗಿ ಅಂತಿಮವಾಗಿ ಜೆಡಿಎಸ್‍ಗೆ ನಿರೀಕ್ಷೆಯಂತೆ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಹಾಸನದಲ್ಲಿ ಈಗಾಗಲೇ ಜೆಡಿಎಸ್‍ನ ಪ್ರಜ್ವಲ್ ರೇವಣ್ಣ ಸಂಸದರಿದ್ದು, ಈ ಬಾರಿ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಇನ್ನು ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯವನ್ನು ಪಡೆದುಕೊಳ್ಳುವಲ್ಲಿ ದಳಪತಿಗಳು ಯಶಸ್ವಿಯಾಗಿದೆ.
ಬಿಜೆಪಿ ಹಾಲಿ ಸಂಸದ ಇರುವ ಕೋಲಾರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಇನ್ನು ಮಂಡ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್‍ಗೆ ನಿರಾಸೆಯಾಗಿದ್ದು, ಅವರು ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.