ಸಮಗ್ರ ನ್ಯೂಸ್: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಮತ್ತಿತರರನ್ನು, ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ, ಕೆ ಜೆ ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಳರ್, ಉಡುಪಿ ಮತ್ತು ಚಿಕ್ಕಮಗಳೂರಿನ ಹಲವು ನಾಯಕರು ಪಾಲ್ಗೊಂಡಿದ್ದರು.
ಜಯಪ್ರಕಾಶ್ ಹೆಗ್ಡೆ ಅವರನ್ನು ಉಡುಪಿ ಚಿಕ್ಕಮಗಳೂರಿಗೆ ಕಾಂಗ್ರೇಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ. ನೇರಾ ನಡೆನುಡಿಯ ಸರಳ ರಾಜಕರಣಿ ಜಯಪ್ರಕಾಶ್ ಹೆಗ್ಡೆ ಈ ಹಿಂದೆ ಆಗಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಉಡುಪಿ ಜಿಲ್ಲೆಯ ಮೊದಲ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅನಂತರ ಕಾಂಗ್ರೆಸ್ ಸೇರಿ 2012ರಲ್ಲಿ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಬಳಿಕ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿಕೊಂಡಿದ್ದರು. ಬಿಜೆಪಿ ಸರಕಾರ ಇದ್ದಾಗ ಇವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ನೀಡಿತ್ತು. ಅವರು ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ವರದಿಯನ್ನು ಇತ್ತೀಚಿಗಷ್ಟೇ ಸರಕಾರಕ್ಕೆ ಸಲ್ಲಿಸಿದ್ದರು.