ಸಮಗ್ರ ನ್ಯೂಸ್: ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿ ಅವಕಾಶ ನೀಡುವುದು ಬಿಜೆಪಿಯ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲ ಯೋಚನೆಗಳನ್ನು ಮಾಡಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ಪಕ್ಷದ ಕಾರ್ಯಕರ್ತನಾಗಿ ನಾನೂ ಅದನ್ನು ಸ್ವಾಗತಿಸುತ್ತೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಸಾಧ್ಯತೆಯನ್ನು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷ ನಿಂತ ನೀರಾಗಬಾರದು. ಹೊಸಬರು ಬರುತ್ತಿರಬೇಕು, ಚಲಾವಣೆಯಲ್ಲಿ ಇರಬೇಕು. ಹಾಗಾಗಿ ಪಕ್ಷದ ರಾಷ್ಟ್ರೀಯ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ದರಾಗಿರುತ್ತೇವೆ. ಯಾರೇ ಅಭ್ಯರ್ಥಿಯಾದರೂ ನಮ್ಮ ಗುರಿ ಇರುವುದು ಬಿಜೆಪಿ ಅಧಿಕಾರಿ ಬರಬೇಕು ಮತ್ತು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಬೇಕು ಎನ್ನುವುದು. ರಾಷ್ಟ್ರೀಯ ನಾಯಕರ ಯೋಚನೆಗೆ ಬದ್ಧರಾಗಿ ನಾವು ಕೆಲಸ ಮಾಡುತ್ತೇವೆ. ಹಾಗಾಗಿ ಪಕ್ಷದ ನಾಯಕರು ಗುಡಿಸು ಎಂದು ಹೇಳಿದರೆ ಗುಡಿಸುತ್ತೇವೆ. ಒರೆಸು ಎಂದು ಹೇಳಿದರೆ ಒರೆಸುತ್ತೇವೆ. ರಾಷ್ಟ್ರೀಯ ನಾಯಕರ ಚಿಂತನೆಗಳು ಏನಿರುತ್ತದೆ, ಯಾವ ರೀತಿಯಲ್ಲಿ ಬದಲಾವಣೆ ತರಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ ಎಂದರು.
ನಾನು ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ನಿರ್ಧಾರಗಳಿಗೆ ಬದ್ಧನಾಗಿರುತ್ತೇನೆ. ನಾವು ಸಂಘಟನೆಯ ಕಾರ್ಯಕರ್ತರಾಗಿ ಬೆಳೆದವರು. ನನಗೆ ಮೂರು ಬಾರಿ ಅವಕಾಶ ಕೊಟ್ಟಿದ್ದಾರೆ. 15 ವರ್ಷ ಕೆಲಸ ಮಾಡಿದ್ದೇನೆ. ಟಿಕೆಟ್ ಸಿಗದಿದ್ದರೂ ಯಾವುದೇ ಅಸಮಧಾನವಿಲ್ಲ ಎಂದರು.