ಸಮಗ್ರ ನ್ಯೂಸ್: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಜಾರಿಗೆ ತರಲು ಕೇಂದ್ರ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಷ್ಠಾನವನ್ನು ಘೋಷಿಸಿದೆ. 2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಈ ಕ್ರಮ ಕೈಗೊಳ್ಳಲಾಗಿದೆ.
2019ರ ಲೋಕಸಭಾ ಚುನಾವಣೆಯ ವೇಳೆ CAA ಜಾರಿಗೆ ತರುವುದು ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿತ್ತು. ಈಗ 2024ರ ಚುನಾವಣೆಯ ಹೊಸ್ತಿಲಲ್ಲಿರುವಾಗ ಕಾಯ್ದೆ ಜಾರಿಗೆ ಬಂದಿದೆ.
ಮಸೂದೆ ಸದನದಲ್ಲಿ ಅಂಗೀಕಾರವಾದ 4 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. 2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಾಗರಿಕರಿಗೆ ಪೌರತ್ವವನ್ನು ನೀಡಲು ಕಾನೂನಿನ ನಿಯಮಗಳನ್ನು ಕೇಂದ್ರ ಇಂದು ಘೋಷಿಸಿದೆ.
ಸದನದಲ್ಲಿ ಅಂಗೀಕಾರ ಆಗಿರುವ ಶಾಸನವು ತೀವ್ರ ಚರ್ಚೆ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ದೇಶಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದಿದ್ದವು. ವಿರೋಧ ಪಕ್ಷದ ರಾಜಕಾರಣಿಗಳು ಮತ್ತು ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳ ತೀವ್ರ ಪ್ರತಿರೋಧದ ನಡುವೆ ಸಂಸತ್ತಿನಲ್ಲಿ ಕಾಯ್ದೆ ಅಂಗೀಕಾರವಾಗಿತ್ತು.