ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಶುರು ಮಾಡಿದ್ದು, ಕರ್ನಾಟಕದ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿ ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಇಂತಹ ಸಮಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಕಾಂಗ್ರೆಸ್‍ನ ರಕ್ಷಿತ್ ಶಿವರಾಂ ಅವರನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.
ಬೆಳ್ತಂಗಡಿ ವಿಧಾನಸಭೆಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಸೋಲಿನ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅಸಮಾಧಾನ ಹೊರ ಹಾಕಿದ್ದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತನ್ನ ಸಮಾಜದ ಕಾಂಗ್ರೆಸ್ ನಾಯಕ ಸೋತ ಕಾರಣಕ್ಕೆ ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷ ಭೇದ ಮರೆತು ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.
ಮಾರ್ಚ್ 10ರಂದು ನಡೆದ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಸಮಾವೇಶದಲ್ಲಿ ಭಾಗಿಯಾಗಿದ್ದ ಉಮನಾಥ್ ಕೋಟ್ಯಾನ್ ಅವರು, ಚುನಾವಣೆ ಎದುರಿಸುವ ಬಿಲ್ಲವ ಅಭ್ಯರ್ಥಿಗಳಿಗೆ ಪಕ್ಷ ಭೇದ ಮರೆತು ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ. ಪಕ್ಷ ಯಾವುದಾದರೂ ಪರವಾಗಿಲ್ಲ ಬಿಲ್ಲವ ಅಭ್ಯರ್ಥಿಗಳನ್ನ ಗೆಲ್ಲಿಸಿ ಎಂಬ ರೀತಿಯಲ್ಲಿ ಕರೆ ನೀಡಿದ್ದಾರೆ. ಬೆಳ್ತಂಗಡಿಯಲ್ಲಿ ಬಿಲ್ಲವ ಅಭ್ಯರ್ಥಿ ರಕ್ಷಿತ್ ಶಿವರಾಂ ಚುನಾವಣೆ ಎದುರಿಸಿ ಸೋತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಹು ಸಂಖ್ಯಾತ ಬಿಲ್ಲವರೇ ಇರುವಾಗ ರಕ್ಷಿತ್ ಯಾಕೆ ಸೋತಿದ್ದಾರೆ? ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಕೊಡೋದಕ್ಕೆ ನಿಮಗೆ ಧೈರ್ಯ ಬರೋದಿಲ್ಲ.
ಉಮಾನಾಥ್ ಕೋಟ್ಯಾನ್ ಹತ್ರ ಮಾತನಾಡಿದ್ರೆ ನನ್ನ ಪಕ್ಷದವರು ಏನಾದ್ರೂ ಹೇಳ್ತಾರಾ ಎಂಬ ಭಯ. ಕಾಂಗ್ರೆಸ್‍ನ ವಿನಯ ಕುಮಾರ್ ಸೊರಕೆ ಹತ್ರ ಮಾತನಾಡಿದ್ರೆ ಏನಾದರೂ ತೊಂದರೆಯಾಗುತ್ತೆ ಎಂಬ ಭಯ. ಇಂತಹ ಹಿಂಜರಿಕೆ ಇಟ್ಟುಕೊಂಡರೆ ಬಿಲ್ಲವ ಸಮಾಜ ಕಟ್ಟಲು ಹೇಗೆ ಸಾಧ್ಯ? ಅದ್ಯಾಕೆ ಬಿಲ್ಲವ ಸಮಾಜದವರಿಗೆ ಈ ಹಿಂಜರಿಕೆ? ಚುನಾವಣೆ ಎದುರಿಸುವ ನಮ್ಮ ಜನಪ್ರತಿನಿಧಿಗಳಿಗೆ ಬಿಲ್ಲವ ಸಮಾಜ ಎಷ್ಟು ನೈತಿಕ ಬೆಂಬಲ ನೀಡುತ್ತೆ ಅನ್ನೋದು ಮುಖ್ಯ. ಯಾವುದೇ ರಾಜಕೀಯ ಪಕ್ಷವಿರಲಿ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಎಂದು ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಕರೆ ನೀಡಿದ್ದಾರೆ.